ನವದೆಹಲಿ: ಸತತವಾಗಿ 30 ದಿನಗಳ ಕಾಲ ಬಂಧನದಲ್ಲಿರುವ ಅಥವಾ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಗೊಳಗಾಗುವ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸಚಿವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮಡಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರದ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಾಗ್ದಾಳಿ ನಡೆಸಿದೆ.
ಪಕ್ಷದ ಮೂವರು ಸಂಸದರು ವಿಪಕ್ಷಗಳ ಸರ್ಕಾರಗಳಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಕೆಡವಲು ಈ ಮಸೂದೆಗಳನ್ನು ಮಂಡಿಸಲಾಗುತ್ತಿದೆ ಎಂದು ಆಪಾದಸಿದ್ದಾರೆ.
ಟಿಎಂಸಿ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿ, ಪ್ರತಿಪಕ್ಷಗಳ ಅಡಳಿತವಿರುವ ಮುಖ್ಯಮಂತ್ರಿಗಳನ್ನು ಸುಳ್ಳು ಆರೋಪಗಳ ಅಡಿಯಲ್ಲಿ ಇಡಿ ಮತ್ತು ಸಿಬಿಐ ಬಂಧಿಸಬಹದು ಮತ್ತು ನ್ಯಾಯಾಲಯ ಅಪರಾಧಿ ಎಂದು ಘೋಷಿಸುವ ಮೊದಲೇ ಅವರನ್ನು ಸ್ಥಾನದಿಂದ ಕಿತ್ತೊಗೆಯಲು ಈ ಮಸೂದೆಗಳನ್ನು ಮಂಡಿಸುತ್ತಿದೆ ಎಂದರು. ಈ ಮಸೂದೆಯು ಒಕ್ಕೂಟ ಸರ್ಕಾರ ಮತ್ತು ನ್ಯಾಯಾಂಗ ಎರಡನ್ನೂ ಕಡೆಗಣಿಸಿದೆ. ಕೇವಲ 240 ಸಂಸದರನ್ನು ಇಟ್ಟುಕೊಂಡು ಬಿಜೆಪಿ ಸಂವಿಧಾನವನ್ನು ಬದಲಿಸುತ್ತದೆ ಎಂಬ ಪ್ರತಿಪಕ್ಷಗಳ ಆರೋಪ ನಿಜವಾಗುತ್ತಿದೆ ಎಂದು ಆಪಾದಿಸಿದ್ದಾರೆ.
ರಾಜ್ಯಸಭೆಯ ಟಿಎಂಸಿ ಸಂಸದ ಡೆರೆಕ್ ಒ ಬ್ರಯಾನ್ ಕೇವಲ 240 ಸಂಸದರನ್ನು ಹೊಂದಿರುವ ಪ್ರಧಾನಿ ಮೋದಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಸಂಸತ್ತಿನಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಲು ಈ ಮಸೂದೆಗಳನ್ನು ಮಂಡಿಸಲು ಮುಂದಾಗಿದೆ ಎಂದು ಟೀಕಿಸಿದ್ದಾರೆ.
ಮತ್ತೊಬ್ಬ ಸಂಸದ ಸಾಕೇತ್ ಗೋಖಲೆ ಅವರು ಮಸೂದೆಗಳ ಕರಾಳ ಮುಖವನ್ನು ಬಿಚ್ಚಿಡುತ್ತಾ ರಾಜ್ಯ ಸರ್ಕಾರಗಳನ್ನು ಉರುಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೊಸ ತಂತ್ರವನ್ನು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶಾದ್ಯಂತ ಮತ ಕಳವು ಹಗರಣ ಬೆಳಕಿಗೆ ಬರುತ್ತಿದ್ದಂತೆ, ಮೋದಿ ಮತ್ತು ಶಾ ಜೋಡಿ ಮತ್ತೊಂದು ತಂತ್ರ ಹೂಡಿ ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಇಡಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಆರೋಪಿಗೂ ಅಪರಾಧಿಗೂ ವ್ಯತ್ಯಾಸ ಇರುತ್ತದೆ. ಯಾವುದೇ ವ್ಯಕ್ತಿ ಶಿಕ್ಷೆಗೆ ಗುರಿಯಾದಾಗ ಮಾತ್ರ ಅತ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಅದುವರೆಗೂ ಆತ ಕೇವಲ ಆರೋಪಿ ಮಾತ್ರ. ಕೇವಲ ಆರೋಪಗಳು ಕೇಳಿ ಬಂದ ಮಾತ್ರಕ್ಕೆ ಪ್ರಧಾನಿ, ಮುಖ್ಯಮಂತ್ರಿ ಅಥವಾ ಮಂತ್ರಿಗಳನ್ನು ಹುದ್ದೆಯಿಂದ ತೆಗೆಯಬಾರದು. ಮೋದಿ ಮತ್ತು ಅಮಿತ್ ಶಾ ಅವರ ಅಧೀನದಲ್ಲಿರುವ ಇಡಿ ಸಿಬಿಐ ನಂತಹ ಸಂಸ್ಥೆಗಳು ತಪ್ಪೆಸಗಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 11 ವರ್ಷಗಳಲ್ಲಿ ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳಲ್ಲಿ ಆಡಳಿತ ಪಕ್ಷದ ಒಬ್ಬರ ಬಂಧನವೂ ಆಗಿಲ್ಲ. ಇಡಿ ಮತ್ತು ಸಿಬಿಐ ನಂತಹ ಸಂಸ್ಥೆಗಳು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಕೆಲಸ ಮಾಡುತ್ತಾ ಬಂದಿವೆ ಎಂದು ಅವರು ಆರೋಪಿಸಿದ್ದಾರೆ