ವಿಧಾನಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಕಾಯ್ದೆ ಅಂಗೀಕಾರ; ನಿಶ್ಚಿತಾರ್ಥಕ್ಕೂ ಶಿಕ್ಷೆ

Most read

ಬೆಂಗಳೂರು: ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಧೇಯಕವನ್ನು ಮಂಡಿಸಿ ಉದ್ದೇಶಿತ ವಿದೇಯಕದ ಅಂಶಗಳನ್ನು ವಿವರಿಸಿದರು.

ಕರ್ನಾಟಕದಲ್ಲಿ ಬಾಲ್ಯವಿವಾಹ ಎಂಬುದು ಸಾಮಾಜಿಕ ಪೀಡುಗಾಗಿದ್ದು, ಯಾವುದೇ ಸರ್ಕಾರಗಳು ಬಂದರೂ, ಕಠಿಣ ಕಾನೂನು ತಂದರೂ ತಡೆಗಟ್ಟಲು ಇದುವರೆಗೂ ಸಾಧ್ಯವಾಗಿಲ್ಲ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಾಲ್ಯ ವಿವಾಹ ತಿದ್ದುಪಡಿ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.

2024-25ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ 1828 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 1260 ಪ್ರಕರಣಗಳನ್ನು ತಡೆಯಲಾಗಿದ್ದು, ಇಂಥ ಕಠಿಣ ಕಾನೂನಿನ ಮಧ್ಯೆ 369 ಬಾಲ್ಯವಿವಾಹ ಪ್ರಕರಣಗಳು ನಡೆದಿವೆ. ಬಾಲ್ಯವಿವಾಹ ನಡೆದ ಪ್ರಕರಣಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಕಾಯ್ದೆ ನಿಯಮದ ಪ್ರಕಾರ, ನಿಶ್ಚಿತಾರ್ಥ ಮಾಡಿದರೂ ಕಾನೂನು ಕ್ರಮಕೈಗೊಳ್ಳಲಾಗುವುದು. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ಒಂದು ಲಕ್ಷ ರೂಪಾಯಿ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಬಾಲ್ಯವಿವಾಹವನ್ನು ಬೇರುಮಟ್ಟದಲ್ಲೇ ಕಿತ್ತುಹಾಕಬೇಕು ಎಂಬುದೇ ನಮ್ಮ ಇಲಾಖೆಯ ಮೂಲ ಉದ್ದೇಶ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.ನಂತರ ವಿಧಾನಸಭೆ ವಿಧೇಯಕವನ್ನು ಅಂಗೀಕರಿಸಿತು.

More articles

Latest article