ಕಲ್ಲೆ ಶಿವೋತ್ತಮ ರಾವ್ ಅವರಿಗೆ ದೇವರಾಜ ಅರಸ್ ಪ್ರಶಸ್ತಿ; ಸಿಎಂ ಸಿದ್ದರಾಮಯ್ಯ ಅಭಿನಂದನೆ

Most read

ಬೆಂಗಳೂರು: ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಪ್ರಶಸ್ತಿಗೆ ಪಾತ್ರರಾದ ಹಿರಿಯ ಪತ್ರಕರ್ತರು ಮತ್ತು ಪ್ರಗತಿಪರ ಚಿಂತಕರಾದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸ್ ಅವರ ಚಿಂತಕರ ಚಾವಡಿಯಲ್ಲಿದ್ದ ಕಲ್ಲೆ ಅವರು ಅರಸು ಅವರ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳ ಹಿಂದಿನ ಪ್ರೇರಕಶಕ್ತಿಯಾಗಿದ್ದರು. ಕಲ್ಲೆ ಅವರು ಸಂಪಾದಕರಾಗಿದ್ದ ಆಗಿನ ಜನಪ್ರಿಯ ವಾರಪತ್ರಿಕೆ ‘ಜನಪ್ರಗತಿ’ ನಾಡಿನ ರಾಜಕೀಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಮುಖವಾಣಿಯಾಗಿತ್ತು. ನಾಡಿನ ಅನೇಕ ಪ್ರಮುಖ ಸಾಹಿತಿಗಳ ಪ್ರಾರಂಭದ ದಿನಗಳ ಕತೆ-ಕವನ-ಲೇಖನಗಳು ಈ ಪತ್ರಿಕೆಯಲ್ಲಿಯೇ ಪ್ರಕಟವಾಗಿತ್ತಿತ್ತು. ಪ್ರಜಾವಾಣಿ ಪತ್ರಿಕೆಯಲ್ಲಿಯೂ ಕಲ್ಲೆ ಅವರು ಸ್ವಲ್ಪ‌ಕಾಲ ಕೆಲಸ ಮಾಡಿದ್ದರು. ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾದ 95ರ ವಯೋಮಾನದಲ್ಲಿರುವ ಕಲ್ಲೆ ಶಿವೋತ್ತಮರಾವ್‌ ಅವರಿಗೆ ಪ್ರಶಸ್ತಿ ಸಂದಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ಸಮುದಾಯಕ್ಕೆ ಸೇರಿರುವ ಕಲ್ಲೆ ಶಿವೋತ್ತಮ್ ರಾವ್ ಅವರು ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಕಲ್ಲೆ ಅವರಿಗೆ ಆರೋಗ್ಯ ಮತ್ತು ಆಯುಷ್ಯ ಸದಾ ಒದಗಿ ಬರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ರಾಜ್ಯ ಸರ್ಕಾರ ಕೊಡಮಾಡುವ 2025–26ನೇ ಸಾಲಿನ ‘ಡಿ.ದೇವರಾಜು ಅರಸು ಪ್ರಶಸ್ತಿ’ಗೆ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ ಅವರು ಆಯ್ಕೆಯಾಗಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಅವರು ನಡೆಸಿದ ಹೋರಾಟ, ದೇವರಾಜು ಅರಸು ಅವರ ತತ್ವ–ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅವರ ಶ್ರಮ ಮತ್ತು ಪತ್ರಕರ್ತರಾಗಿ ನೀಡಿದ ಕೊಡುಗೆಯಿಂದಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ವಿಧಾನಸೌಧದಲ್ಲಿ ಇದೇ ಆ.20ರಂದು ಬೆಳಿಗ್ಗೆ 10.45ಕ್ಕೆ ನಡೆಯುವ ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ರೂ. 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

More articles

Latest article