ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂಬ ತಿರುಚಿದ ವಿಡಿಯೋ ಆಧರಿಸಿ ಬಿಜೆಪಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿದರೆ ಆಡಳಿತ ಪಕ್ಷ ವಿಪಕ್ಷ ಮುಖಮಡರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.
ಸೌಜನ್ಯ ಪರ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ ನೀಡಿದ್ದಾರೆ ಎಂಬ ತಿರುಚಿದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ವಿಧಾನಸಭೆಯಲ್ಲಿ ಇಂದು ಈ ವಿಷಯ ಕುರಿತು ವಾದ ಪ್ರತಿವಾದ ನಡೆಯಿತು.
ಆದರೆ ಈ ಚರ್ಚೆ ಮತ್ತು ಆಡಳಿತ ಮತ್ತು ಪ್ರತಿಪಕ್ಷಗಳ ವೀರಾವೇಶದ ಮಾತುಗಳು ಎಡಿಟೆಡ್ ವಿಡಿಯೋ ಸುತ್ತ ಗಿರಕಿ ಹೊಡೆಯುತ್ತಿವೆಯೇ ಹೊರತು ಅಸಲಿ ವಿಡಿಯೋ ಕುರಿತು ಯಾರೊಬ್ಬರೂ ಮಾತನಾಡುತ್ತಿಲ್ಲ. ಸರಕಾರ ಮತ್ತು ಪ್ರತಿಪಕ್ಷ ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚುತ್ತಿವೆ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.
ಅಸಲಿ ವಿಡಿಯೋದಲ್ಲಿ ಏನಿದೆ?
ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯಲ್ಲಿ ಮಾತನಾಡುತ್ತಾ 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಮತ ಕೇಳಿದ್ದೀರಲ್ಲಾ? ಹಿಂದೂ ಹುಡುಗಿಯನ್ನು ಪ್ರೀತಿಸಿದ್ದ ಮುಸ್ಲಿಂ ಹುಡುಗನಿಗೆ ಹಿಂದೂ ಹುಡುಗನೊಬ್ಬ ಹಲ್ಲೆ ಮಾಡಿದ್ದ. ಗೋವುಗಳನ್ನು ಸಾಗಿಸುತ್ತಿದ್ದವರಿಗೆ ಹಿಂದೂ ಯುವಕರು ತಡೆದು ಹಲ್ಲೆ ಮಾಡಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ನಾನು ಠಾಣೆಗೆ ಹೋಗಿ ಅವರ ಮೇಲೆ ಪ್ರಕರಣ ದಾಖಲಾಗದಂತೆ ನೋಡಿಕೊಂಡು ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದೇನೆ ಎಂದು ಭಾಷಣ ಮಾಡಿದ್ದರು.
ಈ ಹೇಳಿಕೆ ಆಧರಿಸಿ ನಮಿತಾ ಕೆ.ಪೂಜಾರಿ ಎಂಬುವರು ಬೆಳ್ತಂಗಡಿ ಠಾಣೆಗೆ ದೂರು ನೀಡಿ, ಹರೀಶ್ ಪೂಂಜಾ ಶಾಸಕರಾಗಿದ್ದುಕೊಂಡು ಕೋಮು ಪ್ರಚೋದಕ, ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡಬೇಕು ಹಾಗೂ ಶಾಂತಿ ಕದಡಬೇಕು ಎಂಬ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು, ಶಾಸಕ ಪೂಂಜಾ ವಿರುದ್ಧ ಭಾರತೀಯ ದಂಡ ಸಂಹಿತೆ ಐಪಿಸಿ 153, 153(ಎ), 505 (1)(ಬಿ), 505 (1) (ಸಿ) ಮತ್ತು 505 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ತಿಮರೋಡಿ ತಿರುಗೇಟು:
ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿದ್ದರೆ ನನ್ನ ತಲೆದಂಡ ಆಗಲಿ. ಇಲ್ಲ ಅಂದರೆ ಅದನ್ನು ಯಾರು ಹೇಳಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ. ನಮ್ಮ ಶಾಸಕರು (ಹರೀಶ್ ಪೂಂಜಾ) ಹೇಳಿದ್ದಕ್ಕೆ ನನಗೆ ನಂಬಿಕೆ ಇತ್ತು. ಅದನ್ನು ನಾನು ಪುನರುಚ್ಚರಿಸಿದ್ದೇನೆ ಅಷ್ಟೇ. ಅದು ನನ್ನ ಹೇಳಿಕೆ ಅಲ್ಲ ಎಂದು ತಿಮರೋಡಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಹೇಳಿಕೆಯನ್ನು ಸರ್ಕಾರ ತನಿಖೆಗೆ ಒಳಪಡಿಸಬೇಕು. ತನಿಖೆ ನಡೆಸಿ ಈ ಹೇಳಿಕೆ ನೀಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬಂಧಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಮಾತ್ರ ಚರ್ಚೆ ನಡೆಯುತ್ತಿದೆ. ವಾಸ್ತವ ಏನೆಂದರೆ 2023ರಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೇ ಹೇಳಿಕೆಯನ್ನು ತಿಮರೋಡಿ ಪ್ರಸ್ತಾಪಿಸಿ ಪೂಂಜಾ ಅವರನ್ನು ಬಂಧಿಸುವಂತೆ ಆಗ್ರಹಪಡಿಸಿದ್ದರು. ಈ ಆರೋಪವನ್ನು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳಬೇಕು ಇಲ್ಲವೇ ಕೊಲೆ ಮಾಡಿಲ್ಲ ಎಂದಾದರೆ ಸುಳ್ಳು ಹೇಳಿಕೆ ನೀಡಿದ ಹರೀಶ್ ಪೂಂಜಾ ಅವರನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದರು. ಕತ್ತರಿಸಿದ ವಿಡಿಯೋದಲ್ಲಿ ಹರೀಶ್ ಪೂಂಜಾ ಹೇಳಿದ್ದಾರೆ ಎಂಬ ಮಾತುಗಳನ್ನು ಕತ್ತರಿಸಿ ತಿಮರೋಡಿ ಅವರೇ ಈ ಹೇಳಿಕೆ ನೀಡಿದ್ದಾರೆ ಎನ್ನುವಂತೆ ಬಿಂಬಿಸಲಾಗಿದೆ.
ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿದ್ದರೆ ನನ್ನ ತಲೆದಂಡ ಆಗಲಿ. ಇಲ್ಲ ಅಂದ್ರೆ ಅದನ್ನು ಯಾರು ಹೇಳಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ. ನಮ್ಮ ಶಾಸಕರು ಹೇಳಿದ್ದಕ್ಕೆ ನನಗೆ ನಂಬಿಕೆ ಇತ್ತು. ಅದನ್ನು ನಾನು ಪುನರುಚ್ಚರಿಸಿದ್ದೇನೆ ಅಷ್ಟೇ.. ಅದು ನನ್ನ ಹೇಳಿಕೆ ಅಲ್ಲ ಎಂದು ತಿಮರೋಡಿ ಅವರು ಸ್ಪಷ್ಟನೆ ನೀಡಿದ್ದಾರೆ.