ಪಟನಾ: ಎರಡು ತಿಂಗಳಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಸುಪ್ರೀಂಕೋರ್ಟ್ ನಿರ್ದೆಶನದಂತೆ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ 65 ಲಕ್ಷ ನಕಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ಸಂದರ್ಭದಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿತ್ತು. ಈ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಚುನಾವಣಾ ಆಯೋಗ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಕ್ರಮವನ್ನು ವೋಟ್ ಚೋರಿ ಎಂದು ಜರಿದಿದ್ದರು.
ಇತ್ತೀಚೆಗೆ ಸುಪ್ರೀಂಕೋರ್ಟ್ ಆಗಸ್ಟ್ 19 ರೊಳಗೆ ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾದ ಹೆಸರುಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಆಗಸ್ಟ್ 22 ರೊಳಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶನದ ನೀಡಿತ್ತು.
ಚುನಾವಣಾ ಆಯೋಗವು ಪ್ರತಿ ಮತಗಟ್ಟೆಗಳಲ್ಲಿ ಗೈರುಹಾಜರಿ, ಸ್ಥಳಾಂತರಗೊಂಡ ಮತ್ತು ಮೃತ (‘ASD’) ಮತದಾರರ ಹೆಸರುಗಳನ್ನು ಪ್ರಕಟಿಸುತ್ತಿದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆನ್ ಲೈನ್ ಮೂಲಕವೂ ಪ್ರಕಟಿಸಲಿದೆ ಎಂದು ಆಯೋಗದ ಆಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.