ಆರ್.ಎಸ್.ಎಸ್, ತಾಲಿಬಾನ್ ಸಂಘಟನೆಗಿಂತಲೂ ಹೆಚ್ಚು ಅಪಾಯಕಾರಿ; ಬಿ ಕೆ ಹರಿಪ್ರಸಾದ್‌ ಬಿಜೆಪಿಗೆ ತಿರುಗೇಟು

Most read

ಬೆಂಗಳೂರು: ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ, ಧರ್ಮದ ಅಫೀಮನ್ನು ಯುವಜನರಲ್ಲಿ ತುಂಬುವ, ಸಮಾಜದ ವಿಚ್ಛಿದ್ರಕಾರಿ ಸಂಘಟನೆ ಆರ್.ಎಸ್.ಎಸ್, ತಾಲಿಬಾನ್ ಸಂಘಟನೆಗಿಂತಲೂ ಹೆಚ್ಚು ಅಪಾಯಕಾರಿ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಸಂಘ ಪರಿವಾರದ ಆಳ ಅಗಲ ಅಷ್ಟೇ ಅಲ್ಲ, ಅದರ ಸುತ್ತಳತೆಯನ್ನೂ ಬಲ್ಲೆ. ಆರ್.ಎಸ್.ಎಸ್. ನೂರು ವರ್ಷಗಳಲ್ಲಿ ನಡೆಸಿರುವ ಸಮಾಜ ಸೇವೆಯ ಎಣಿಕೆಯ ಲೆಕ್ಕ ನಂತರ ಕೊಡುವಿರಂತೆ, ಸಂಘ ನಡೆಸಿದ ಸಮಾಜ ಘಾತುಕ ಕೃತ್ಯಗಳ ದಾಖಲೆಗಳೇ ಹೇಳುವ ಲೆಕ್ಕಾ ಗೊತ್ತಾ? ಸಮಾಜ ಸೇವೆ ಎಂಬುವುದು ಕೇವಲ ಮುಖವಷ್ಟೇ, ಅದರ ಹಿಂದಿನ ಮುಖವಾಡಗಳು ಸಂವಿಧಾನಬಾಹೀರ ಚಟುವಟಿಕೆಗಳಿಗೆ ಲೆಕ್ಕವಿಲ್ಲ. ಅಗೆದಷ್ಟು, ಬಗೆದಷ್ಟು ಕರಾಳವಾಗಿದೆ ಎಂದು ಸಂಘ ಪರಿವಾರದ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ.

ಆರ್.ಎಸ್.ಎಸ್ ಶಾಖೆಯಲ್ಲಿ ಮಾತ್ರ ಪ್ರವೇಶ ಇರುವ ವಿಜಯೇಂದ್ರ ಅವರೇ ಸಂಘವನ್ನು ಸಮರ್ಥಿಸುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸುವ ಧೈರ್ಯ ಮಾಡಿ.‌ ಮೂಲಭೂತವಾಗಿ ಆರ್.ಎಸ್.ಎಸ್. ಎನ್ನುವುದು ಏನು? ಅದೊಂದು ಸಾಂಸ್ಕೃತಿಕ ಸಂಘಟನೆಯೇ? ಸಾಮಾಜಿಕ ಸೇವಾ ಸಂಸ್ಥೆಯೇ? ಸಾರ್ವಜನಿಕ ದತ್ತಿಯೇ? ಗುಪ್ತ ರಾಜಕೀಯ ಉದ್ದೇಶ ಹೊಂದಿರುವ ಕಾರ್ಯಕರ್ತರ ಕೂಟವೇ? ಇಲ್ಲವೇ, ಕೇವಲ ಹಿಂದೂ ಸಂಘಟನೆಯೇ? ಎಂದು ವಿಜಯೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.

ಸಮಾಜ ಸೇವೆಯ ಮುಖ ಹೊತ್ತಿರುವ ಆರ್.ಎಸ್.ಎಸ್.‌ ನೊಂದಣಿ ಸಂಘಟನೆಯೇ? ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಘಟನೆಯ ಹಣದ ಮೂಲ ಯಾವುದು? ಜನರು ನೀಡುವ ದೇಣಿಗೆಯ ಲೆಕ್ಕಪತ್ರ ಒಮ್ಮೆಯಾದರೂ ಬಹಿರಂಗಗೊಳಿಸಿದ್ದೀರಾ? ಚೆಕ್ ಮೂಲಕ ಲಂಚ ಪಡೆಯುವ ನಿಮಿಗೆ ಸಂಘದ ಲೆಕ್ಕಪತ್ರ ಕೇಳುವ ಧೈರ್ಯ ಎಲ್ಲಿಂದ ಬರಬೇಕು ಬಿಡಿಎಂದು ಲೇವಡಿ ಮಾಡಿದ್ದಾರೆ.

ಹಿಂದೂ ನಾವೆಲ್ಲ ಒಂದು ಎನ್ನುತ್ತಲೇ ಚಾತುರ್ವರ್ಣ ವ್ಯವಸ್ಥೆಯನ್ನು ಪಾಲಿಸುವ ಸಂಘಕ್ಕೆ ಹಿಂದೂ ಎನ್ನುವುದು ಕೇವಲ ರಾಜಕೀಯದ ಲಾಭ ಪಡೆಯಲು ಬಳಸುವ ಆಯುಧ ಅಷ್ಟೇ. ನಮಗೆ ರಾಜಕೀಯ ಎದುರಾಳಿ ಬಿಜೆಪಿ ಅಲ್ಲವೇ ಅಲ್ಲ, ರಾಜಕೀಯದ ಮುಖವಾಡ ಹೊಂದಿರುವ ಆರ್.ಎಸ್.ಎಸ್. ನಮ್ಮ ಸೈದ್ದಾಂತಿಕ ವಿರೋಧಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆರ್.ಎಸ್.ಎಸ್ ಬಗ್ಗೆ ಮಾತಾಡುವುದಕ್ಕೆ ಧೈರ್ಯ ಮಾತ್ರವಲ್ಲ, ಪ್ರಮಾಣಿಕತೆಯೂ ಇದೆ. ಅದರ ಹಿಡನ್ ಅಜೆಂಡಾಗಳನ್ನ ಸ್ಷಷ್ಟವಾಗಿ ಅರಿತಿದ್ದೇನೆ. ಸಂಘದ ಬಗ್ಗೆ ಮಾತಾಡಲು ಪ್ರೇರೇಪಿಸಿ ನನ್ನ ಮುಂದೆ ಸೈದ್ದಾಂತಿಕವಾಗಿ ಬೆತ್ತಲಾಗಬೇಡಿ. ರಾಜಕೀಯದ ಎಳಸುಗಾರಿಕೆ ಬಿಟ್ಟು ಒಂದಿಷ್ಟು ಪ್ರಬುದ್ಧತೆಗೆ ತೆರೆದುಕೊಳ್ಳಿ ಎಂದು ಬಿಕೆ ಹರಿಪ್ರಸಾದ್‌ ಅವರು ವಿಜಯೇಂದ್ರಗೆ ಕಿವಿ ಮಾತು ಹೇಳಿದ್ದಾರೆ.

More articles

Latest article