ಪಟ್ನಾ: ಮತ ಕಳ್ಳತನಕ್ಕೆ ಶಾಶ್ವತವಾಗಿ ಅಂತ್ಯ ಹಾಡಲು ಆಗಸ್ಟ್ 17 ರಿಂದ ಬಿಹಾರದಲ್ಲಿ ‘ವೋಟರ್ ಅಧಿಕಾರ ಯಾತ್ರೆ‘ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಕಟಿಸಿದ್ದಾರೆ.
ಈ ಯಾತ್ರೆ ಕುರಿತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಅವರು, ವಿಡಿಯೊ ಸಂದೇಶ ಹಂಚಿಕೊಂಡಿದ್ದು, ಆಗಸ್ಟ್ 17ರಿಂದ ನಾವು ಬಿಹಾರದ ನೆಲದಲ್ಲಿ ಮತ ಕಳ್ಳತನದ ವಿರುದ್ಧ ನೇರ ಹೋರಾಟ ನಡೆಸಲಿದ್ದೇವೆ. ಇದು ಕೇವಲ ಒಂದು ಚುನಾವಣೆಗೆ ಸಂಬಂಧಪಟ್ಟಿದ್ದಲ್ಲ. ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಒಬ್ಬ ವ್ಯಕ್ತಿ, ಒಂದು ಮತ ಎಂಬ ಮೂಲ ತತ್ವವನ್ನು ರಕ್ಷಿಸುವ ಉದ್ದೇಶದೊಂದಿಗೆ ಈ ಹೋರಾಟ ನಡೆಯಲಿದೆ. ಹೋರಾಟದಲ್ಲಿ ಯುವಕರು, ಕಾರ್ಮಿಕರು, ರೈತರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ದೇಶದ ಪ್ರತಿಯೊಬ್ಬ ಮತದಾರರ ಪಟ್ಟಿಯೂ ಸರಿಯಾಗಬೇಕು. ಅದುವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ. ಬಿಹಾರದ ಪತ್ರಿಯೊಬ್ಬ ಮತದಾರನೂ ಈ ಯಾತ್ರೆಯಲ್ಲಿ ಭಾಗಿಯಾಗಬೇಕು. ಮತ್ತು ಪ್ರತಿಯೊಬ್ಬ ನಾಗರಿಕನೂ ಈ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಾರಿ ವೋಟ್ ಚೋರಿ ನಡೆಸಿದವರಿಗೆ ಸೋಲು ಉಂಟಾಗಲೇಬೇಕು ಮತ್ತು ಮತದಾರ ಗೆಲ್ಲಬೇಕು. ಈ ಮೂಳಕ ಸಂವಿಧಾನವೂ ಗೆಲುವು ಸಾಧಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.