“ರಾಹುಲ್ ರನ್ನು ಭೇಟಿಯಾಗಿ ತುಂಬಾ ಖುಷಿಯಾಯಿತು, ನಮ್ಮ ಕಷ್ಟಗಳನ್ನು ಆಲಿಸುವ ದೊಡ್ಡ ನಾಯಕನೊಬ್ಬನನ್ನು ಇದುವರೆಗೆ ನಾವು ಕಂಡಿರಲಿಲ್ಲ” -ಸೀಮಾ ಖಾತುಮ್, ಬೀಡಿ ಕಟ್ಟುವ ಮಹಿಳೆ
ಇಂದು (02.02.2014) ಐದು ದಿನಗಳ ಪಶ್ಚಿಮ ಬಂಗಾಳದ ಯಾತ್ರಾ ಹಂತವನ್ನು ಯಶಸ್ವಿಯಾಗಿ ಮುಗಿಸಿ ಭಾರತ ಜೋಡೋ ನ್ಯಾಯ ಯಾತ್ರೆಯು ಏಳನೆಯ ರಾಜ್ಯವಾದ ಜಾರ್ಖಂಡ್ ಅನ್ನು ಪ್ರವೇಶಿಸಿತು.
ಇಂದಿನ ಕಾರ್ಯಕ್ರಮಗಳು: ಬೆಳಿಗ್ಗೆ 8.00 ಕ್ಕೆ ಪಶ್ಚಿಮ ಬಂಗಾಳದ ಗೋಕರ್ಣದಿಂದ ಖಾರ್ಗಾಮ್- ತಾರಾಪಿತ್ ಮಾರ್ಗವಾಗಿ ಯಾತ್ರೆ ಆರಂಭವಾಯಿತು. ರಾಮಪುರಹಟ್ ನ ಭರ್ಸಾಲಾ ಮೋರ್ ನಲ್ಲಿ ಮಂಜಾನೆಯ ವಿರಾಮದ ಬಳಿಕ ಸಾರ್ವಜನಿಕ ಭಾಷಣ ನಡೆಯಿತು.
ಮಧ್ಯಾಹ್ನ 2.45 ಕ್ಕೆ ರತನ್ ಪುರದಿಂದ ಯಾತ್ರೆ ಪುನರಾರಂಭಗೊಂಡಿತು. 2.45 ಕ್ಕೆ ಪಶ್ಚಿಮ ಬಂಗಾಳ – ಜಾರ್ಖಂಡ ಗಡಿಯಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿಯವರು ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಗೆ ಧ್ವಜ ಹಸ್ತಾಂತರಿಸಿದರು.
ಯಾತ್ರೆಯು 4.30 ಕ್ಕೆ ಜಾರ್ಖಂಡ್ ನ ಪಕೂರ್ ತಲಪಿತು. ಜಾರ್ಖಂಡ್ ನ ಹಿರನ್ ಪುರದಲ್ಲಿ ಸಂಜೆಯ ವಿರಾಮದ ಬಳಿಕ ಜೋಗೇಶ್ವರ್ ದಲ್ಲಿ ಯಾತ್ರಿಗಳು ರಾತ್ರಿಯ ವಾಸ್ತವ್ಯ ಹೂಡಿದರು.
10 ನೇ ಸ್ಟೇಟ್ ಬೋರ್ಡ್ ಮಾಧ್ಯಮಿಕ ಪರೀಕ್ಷೆಯ ಕಾರಣ ಯಾತ್ರೆಗೆ ಬಂಗಾಳ ಪೊಲೀಸರು ಬೆಳಿಗ್ಗೆ ಅನುಮತಿ ಕೊಡಲಿಲ್ಲ. ಹಾಗಾಗಿ ಯಾತ್ರೆ ಕೊಂಚ ತಡವಾಗಿ ಆರಂಭವಾಯಿತು.
ಯಾತ್ರೆಯ ಮುರ್ಶಿದಾಬಾದ್ ನ ಬೆರಹಾಮ್ ಪುರ ಕಡೆಗೆ ಹೋಗುತ್ತಿದ್ದಾಗ ರಾಹುಲ್ ಗಾಂಧಿಯವರು ಪೂರ್ವಯೋಜಿತವಲ್ಲದ ಒಂದು ಭೇಟಿಯನ್ನು ಸುಟಿಯ ಮಧುಪರ ಗ್ರಾಮದಲ್ಲಿ ಮಾಡಿದರು. ಅಲ್ಲಿ ಸುಟಿಯ ಅಕ್ಬರ್ ಶೇಕ್ ಅವರ ಮನೆಯಲ್ಲಿ ಮಹಿಳೆಯರು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದು ಅವರನ್ನು ರಾಹುಲ್ ಮಾತನಾಡಿಸಿದರು. ಅವರ ಕಷ್ಟ ಸುಖಗಳನ್ನು ಆಲಿಸಿದರು. “ರಾಹುಲ್ ರನ್ನು ಭೇಟಿಯಾಗಿ ತುಂಬಾ ಖುಷಿಯಾಯಿತು, ನಮ್ಮ ಕಷ್ಟಗಳನ್ನು ಆಲಿಸುವ ದೊಡ್ಡ ನಾಯಕನೊಬ್ಬನನ್ನು ಇದುವರೆಗೆ ನಾವು ಕಂಡಿರಲಿಲ್ಲ” ಎಂದು 34 ರ ಹರೆಯದ ಸೀಮಾ ಖಾತುಮ್ ಖುಷಿಯಿಂದ ಹೇಳಿದರು. ಸೀಮಾ ಅಲ್ಲದೆ ಅಲ್ಲಿ ಒಂಬತ್ತು ಮಹಿಳಾ ಬೀಡಿ ಕೆಲಸಗಾರರಿದ್ದರು.
ಭಾರತ ಜೋಡೋ ಯಾತ್ರೆ ಬಂಗಾಳದಲ್ಲಿ ಸಾಗುವಾಗ ಇಂಡಿಯಾ ಕೂಟದ ಸದಸ್ಯ ಪಕ್ಷವಾದ ಸಿಪಿಐ (ಎಂ) ಪಕ್ಷದವರೂ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಸಿಪಿಎಂ ಸ್ಟೇಟ್ ಸೆಕ್ರಟರಿ ಮಹಮದ್ ಸಲೀಂ, ಸೆಂಟ್ರಲ್ ಕಮಿಟಿ ಮೆಂಬರ್ ಸುಜನ್ ಚಕ್ರವರ್ತಿ ಮತ್ತಿತರ ನಾಯಕರೂ ಜತೆಗಿದ್ದರು. “ಆರ್ ಎಸ್ ಎಸ್ ಬಿಜೆಪಿ ಮತ್ತು ಅನ್ಯಾಯದ ವಿರುದ್ಧದ ಹೋರಾಟದಲ್ಲಿ ನಾವೂ ಸದಾ ಇದ್ದೇವೆ” ಎಂದು ಅವರು ಹೇಳಿದರು.
ಜಾರ್ಖಂಡ್ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಯಾತ್ರೆಯು 8 ದಿನಗಳ ಕಾಲ ನಡೆಯಲಿದೆ. 13 ಜಿಲ್ಲೆಗಳನ್ನು ಹಾದುಹೋಗಲಿದೆ.
ಶ್ರೀನಿವಾಸ ಕಾರ್ಕಳ, ಮಂಗಳೂರು