ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹತ್ಯೆಗಳ ಕುರುಹುಗಳನ್ನು ಪತ್ತೆ ಹಚ್ಚಲು ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಬಳಸಲು ಎಸ್ ಐಟಿ ನಿರ್ಧರಿಸಿದೆ. ಈಗಾಗಲೇ ಜಿಪಿಆರ್ ಬೆಳ್ತಂಗಡಿಗೆ ಆಗಮಿಸಿದ್ದು ಇಂದು ಅನಾಮಿಕ ಸಾಕ್ಷಿ ದೂರುದಾರ ತೋರಿಸಿರುವ 13ನೇ ಸ್ಥಳದಲ್ಲಿ ಅವಶೇಷಗಳಿಗಾಗಿ ಹುಡುಕಾಟ ನಡೆಯಲಿದೆ ಎಂದು ತಿಳಿದು ಬಂದಿದೆ.
13ನೇ ಸ್ಥಳ ತೀವ್ರ ಕುತೂಲಹ ಕೆರಳಿಸಿದೆ. ಈ ಸ್ಥಳದಲ್ಲಿ ಅತಿ ಹೆಚ್ಚು ಶವಗಳನ್ನು ಹೂತಿರುವುದಾಗಿ ಸಾಕ್ಷಿ ದೂರುದಾರ ಹೇಳಿದ್ದಾನೆ. ಎಸ್ ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಈ ಸ್ಥಳದಲ್ಲಿ ಶೋಧ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೆ, ಅನಾಮಿಕ ದೂರುದಾರ ತೋರಿಸಿದ 15 ಸ್ಥಳಗಳಲ್ಲಿ ಎಸ್ ಐಟಿ ಶೋಧ ನಡೆಸಿದ್ದು, 6 ನೇ ಜಾಗದಲ್ಲಿ ಮಾತ್ರ ಮಾನವ ದೇಹದ ಅವಶೇಷಗಳು ಪತ್ತೆಯಾಗಿವೆ. ಉಳಿದ ಸ್ಥಳಗಳಲ್ಲಿ ಕುರುಹುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸಲು ಎಸ್ಐಟಿ ನಿರ್ಧರಿಸಿದೆ. ಜಿಪಿಆರ್ ಭೂಮಿಯೊಳಗೆ ಇರುವ ವಸ್ತುಗಳ ಚಿತ್ರಗಳನ್ನು ತೋರಿಸಲಿದೆ.
ಈ ಮಧ್ಯೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ಧರ್ಮಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಯೋಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯುವರಾಜ್, ಡಿವೈಎಸ್ ಪಿ ರವಿ ಸಿಂಗ್ ಸೇರಿದಂತೆ ನಾಲ್ವರ ತಂಡ ಧರ್ಮಸ್ಥಳ ಗ್ರಾಮ ಪಂಚಾಯಿತಿ ಕಚೇರಿ, ಬೆಳ್ತಂಗಡಿ ಯಲ್ಲಿರುವ ಎಸ್ ಐಟಿ ಕಚೇರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಅನಾಮಿಕ ಸಾಕ್ಷಿ ದೂರುದಾರನ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಆಯೋಗದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿನೊಬ್ಬನನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಕಳೆದ ದಶಕಗಳಲ್ಲಿ ಧರ್ಮಸ್ಥಳದಲ್ಲಿ ಮೃತದೇಹಗಳ ಪತ್ತೆಗೆ ಸಂಬಂಧಿಸಿದಂತೆ ದಾಖಲಾದ ಅಸಹಜ ಸಾವು ಪ್ರಕರಣಗಳ ಮಾಹಿತಿಯನ್ನು ಧರ್ಮಸ್ಥಳ ಠಾಣೆಯಿಂದ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.