ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡುವ ಸಂಬಂಧ ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆದು ತೀರ್ಮಾನ ಮಾಡಲಾಗುವುದು ಎಂದು ಶಾಲಾ ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ವಿಷಯ ಪ್ರಸ್ತಾಪಿಸಿ ಬಾಳೆಹಣ್ಣು ಮತ್ತು ಮೊಟ್ಟೆ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೆಲವು ಭಾಗಗಳಲ್ಲಿ ವಾರದಲ್ಲಿ ಮೂರು ದಿನ ಮೊಟ್ಟೆ, ಮೂರು ದಿನ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ಇದು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸ್ಪಷ್ಟನೆ ನೀಡಿದ ಸಚಿವರು ಅಜೀಂ ಪ್ರೇಮ್ಜಿ ಪ್ರತಿಷ್ಠಾನ ನೀಡುವ ಅನುದಾನದಲ್ಲಿ ಮೊಟ್ಟೆ, ಬಾಳೆಹಣ್ಣು ಹಾಗೂ ಕೆಲವು ಭಾಗಗಳಲ್ಲಿ ಮಾತ್ರ ಹೆಚ್ಚು ದಿನ ಮೊಟ್ಟೆಯನ್ನು ವಿತರಿಸಲಾಗುತ್ತಿದೆ. ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುವ ಬಗ್ಗೆ ಕೆಲವು ಕಡೆ ಆಕ್ಷೇಪ ಕೇಳಿಬಂದಿರುವುದು ನಿಜ. ಹೀಗಾಗಿ ಮುಂದಿನ ದಿನಗಳಲ್ಲಿ ಶಾಲೆಗೆ ಪ್ರವೇಶ ಪಡೆದ ಕೂಡಲೇ ಪೋಷಕರಿಂದ ಮೊಟ್ಟೆ ತಿನ್ನುವ ಇಲ್ಲವೇ ಬಾಳೆಹಣ್ಣು ತಿನ್ನುವ ಬಗ್ಗೆ ಅನುಮತಿ ಪತ್ರವನ್ನು ಪಡೆಯುತ್ತೇವೆ. ಕೆಲವು ಮಕ್ಕಳಿಗೆ ಮೊಟ್ಟೆ ತಿನ್ನುವುದಕ್ಕೆ ಪೋಷಕರಿಂದ ವಿರೋಧವಿದೆ ಎಂದರು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ಕೆಲವು ಭಾಗಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಇರುವುದರಿಂದ ಮೊಟ್ಟೆ ವಿತರಣೆ ಮಾಡುವಂತೆಯೂ ಶಿಕ್ಷಣ ತಜ್ಞರು ಮತ್ತು ವೈದ್ಯರು ಶಿಫಾರಸ್ಸು ಮಾಡಿದ್ದಾರೆ. ಅಂತಿಮವಾಗಿ ಪೋಷಕರ ವಿವೇಚನೆಗೆ ಬಿಡುತ್ತೇವೆ ಎಂದು ಸಚಿವರು ಹೇಳಿದರು.