ಧರ್ಮಸ್ಥಳ ಹತ್ಯೆಗಳು: ತನಿಖೆಯ ಹಾದಿ ತಪ್ಪಿಸಲು ಉತ್ಖನನ ನಡೆಯುವ ಅರಣ್ಯ ಪ್ರದೇಶದಲ್ಲಿ 10 ಅಡಿ ಮಣ್ಣು ಸುರಿದಿದ್ದು ಏಕೆ? : ವಕೀಲ ಮಂಜುನಾಥ್‌ ಪ್ರಶ್ನೆ

Most read

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಹತ್ಯೆ ಮಾಡಿ ಹೂತು ಹಾಕಿರುವ ಶವಗಳ ಅವಶೇಷಗಳನ್ನು ಪತ್ತೆ ಮಾಡುತ್ತಿರುವ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಸತ್ಯವನ್ನು ನಾಶಮಾಡಲು ಅರಣ್ಯ ಪ್ರದೇಶದುದ್ದಕ್ಕೂ ಸುಮಾರು 10 ಅಡಿ ಮಣ್ಣು ಮತ್ತು ತ್ಯಾಜ್ಯವನ್ನು ಸುರಿದಿದ್ದಾರೆ ಎಂದು ಸುಜಾತಾ ಭಟ್‌ ಅವರ ವಕೀಲ ಮಂಜುನಾಥ್‌ ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ ಮಣ್ಣು ಮತ್ತು ತ್ಯಾಜ್ಯವನ್ನು ಹಾಕಿರುವುದಕ್ಕೆ ಪುರಾವೆಯಾಗಿ ಫೊಟೋಗಳನ್ನು ಒದಗಿಸಿದ್ದಾರೆ.

ಇಂದು ಬಾಹುಬಲಿ ಬೆಟ್ಟದ ಸಮೀಪದ ಅರಣ್ಯ ಪ್ರದೇಶದಲ್ಲಿ ಉತ್ಖನನ ನಡೆಯುತ್ತಿದೆ. ಸಾಕ್ಷ್ಯಗಳನ್ನು ಪತ್ತೆ ಮಾಡಲು ಸಾಧ್ಯವಾಗಬಾರದು ಎಂಬ ದುರುದ್ದೇಶದಿಂದ ಅರಣ್ಯ ಪ್ರದೇಶದುದ್ದಕ್ಕೂ ಸುಮಾರು ಹತ್ತು ಅಡಿಗಳಷ್ಟು ಮಣ್ಣು ಮತ್ತು ತ್ಯಾಜ್ಯವನ್ನು ಸುರಿಯಲಾಗಿದೆ. 10-12 ಅಡಿಗಳವರೆಗೆ ಮಣ್ಣು ಸುರಿದಿದ್ದು,7 ಅಡಿಗಳವರೆಗೆ ಅಗೆದರೂ ಯಾವುದೇ ಅವಶೇಷಗಳು ಲಭ್ಯವಾಗುವುದಿಲ್ಲ.  ಸ್ಥಳದಲ್ಲಿ ಯಾವುದೇ ಪುರಾವೆ ಲಭ್ಯವಾಗದೇ ಹೋದರೆ ನ್ಯಾಯದಾನಕ್ಕೆ ಅಡಚಣೆ ಉಂಟಾಗುತ್ತದೆ. ವಿಶೇಷ ತನಿಖಾ ತಂಡ (ಎಸ್‌ ಐಟಿ)ದ ತನಿಖೆಗೆ ಅಡಚಣೆ ಉಂಟಾಗಲಿ ಎಂಬ ಕಾರಣದಿಂದಲೇ ಇಂತಹ ಕೃತ್ಯವನ್ನು ನಡೆಸಲಾಗಿದೆ.  ಆದರೂ ಎಸ್‌ ಐಟಿ ಈ ಪಿತೂರಿಯನ್ನು ಬಹಿರಂಗಪಡಿಸಲಿದೆ ಮತ್ತು ಮೆಟ್ಟಿ ನಿಲ್ಲಲಿದೆ ಎಂಬ ವಿಶ್ವಾಸ ಇದೆ ಎಂದು ಮಂಜುನಾಥ್‌ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಣ್ಣು ಮತ್ತು ತ್ಯಾಜ್ಯವನ್ನು ಸುರಿಯಲು ಈ ನಿರ್ಧಿಷ್ಟ ಮತ್ತು ಸೂಕ್ಷ್ಮ ಪ್ರದೇಶವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

More articles

Latest article