ಯಲ್ಲಾಪುರ: ಯಲ್ಲಾಪುರ ತಾಲ್ಲೂಕಿನ ಅನಗೋಡಿನ ಬೆರಗದ್ದೆಯಲ್ಲಿ ಸಿದ್ದಿ ಸಮುದಾಯದ ಮಹಿಳೆಯೊಬ್ಬರು ಎರಡು ದಿನಗಳ ಹಿಂದೆ ಬೆಂಕಿ ಹಚ್ಚಿಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಮುಖಂಡರು ವಿಧಾನ ಪರಿಷತ್ ಸದಸ್ಯ ಸಿದ್ದಿ ಸಮುದಾಯದ ಶಾಂತಾರಮ ಸಿದ್ದಿಯವರನ್ನು ಇಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿ, ಆ ಮಹಿಳೆ ಸತ್ತಿರುವುದು ಹಸಿವಿನಿಂದ ಎಂದು ದೂರಿದ್ದಾರೆ. ʼರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಿದೆ ಎಂದು ಹೇಳುತ್ತಿರುವಾಗ ಆದಿವಾಸಿ ಸಮುದಾಯದ ವ್ಯಕ್ತಿ ಹೀಗೆ ಹಸಿವಿನಿಂದ ಸತ್ತಿರುವುದು ಸರ್ಕಾರದ ವೈಫಲ್ಯ ಎಂದು ಬಿಜೆಪಿ ಮುಖಂಡ ಹರಿಪ್ರಕಾಶ ಕೋಣೆಮನೆ ದೂರಿದ್ದಾರೆ.
ಶಾಂತಾರಾಮ ಸಿದ್ದಿ ಮತ್ತು ಬಿಜೆಪಿ ಮುಖಂಡರು ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ವಿಷಯದ ಸತ್ಯಾಸತ್ಯತೆಯನ್ನು ʼಕನ್ನಡ ಪ್ಲಾನೆಟ್ʼ ಪರಿಶೀಲಿಸಿತು.
ಅಸಲಿ ವಿಷಯ ಏನು?
ಲಕ್ಷ್ಮಿ ಸಿದ್ದಿ (48) ಎರಡು ದಿನಗಳ ಹಿಂದೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಮಹಿಳೆ. ಇವರು ಆತ್ಮಹತ್ಯೆ ಮಾಡಿಕೊಂಡ ನಂತರದಲ್ಲಿ ಅವರ ಮಗಳು ಮಂಗಳಾ ಸಿದ್ದ ಪೊಲೀಸ್ ಠಾಣೆಗೆ ನೀಡಿರುವ ಹೇಳಿಕೆಯಲ್ಲಿ ʼತಮ್ಮ ತಾಯಿ ಲಕ್ಷ್ಮೀ ಜೀವನದಲ್ಲಿ ಜಿಗುಪ್ಪೆಗೊಂಡಿದ್ದರು. ಚಿಮಣಿ ಹಚ್ಚಲು ತಂದಿಟ್ಟ ಡಿಸೇಲ್ ಅನ್ನು ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆ ಗೆ ಪ್ರಯತ್ನಿಸಿದ್ದರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದರು.
ಆದರೆ, ಎರಡು ದಿನಗಳ ನಂತರ ಬಿಜೆಪಿ ಮುಖಂಡರು ಪ್ರಕರಣಕ್ಕೆ ʼಹಸಿವಿನʼ ಬಣ್ಣ ಕೊಡಲು ಪ್ರಯತ್ನಿಸಿರುವುದು ಕಂಡು ಬಂದಿದೆ.
ʼಲಕ್ಷ್ಮಿ ಅವರು ಯಲ್ಲಾಪುರ ತಾಲ್ಲೂಕಿನ ಇಡಗುಂಡಿ ಗ್ರಾಮದಲ್ಲಿದ್ದ ತಮ್ಮ ಗಂಡನೆ ಮನೆಯನ್ನು ತೊರೆದು ತಾಯಿಯ ಊರಿಗೆ ಬಂದು ತವರು ಮನೆಯ ಪಕ್ಕದಲ್ಲಿ ಮೂವರು ಮಕ್ಕಳೊಂದಿಗೆ ವಾಸವಾಗಿದ್ದರು. ಇವರ ಕುಟುಂಬವು ಸಿದ್ದಿ ಫುಡ್ ಕಿಟ್ ಪಡೆದುಕೊಳ್ಳುತ್ತಿತ್ತುʼ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಸಿಇಒ ಒದಗಿಸಿರುವ ಮಾಹಿತಿ ಕನ್ನಡ ಪ್ಲಾನೆಟ್ ಗೆ ಲಭ್ಯವಾಗಿದೆ. ತಹಶಿಲ್ದಾರರು ಪಡೆದಿರುವ ʼಸಾವಿನ ಹೇಳಿಕೆʼಯಲ್ಲಿ ಸಹ ಆಕೆಯು ವೈಯಕ್ತಿಕ ಕಾರಣದಿಂದ ಬೆಂಕಿಹಚ್ಚಿಕೊಂಡಿರುವುದಾಗಿ ಹೇಳಿರುವುದು ದಾಖಲಾಗಿದೆ. ಅದರಲ್ಲಿ ಆಕೆ ತಾನು ಹಸಿವಿನಿಂದ ಸಾಯುತ್ತಿದ್ದೇನೆ ಎಂದು ಹೇಳಿರುವುದಿಲ್ಲ.
ಸಿದ್ಧಿ ಸಮದಾಯದ ಮುಖಂಡರು ಹೇಳಿದ್ದು
ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಮ್ಯಾನುಅಲ್ ಫರ್ನಾಂಡಿಸ್ ಸಿದ್ದಿ ಅವರನ್ನು ʼಕನ್ನಡ ಪ್ಲಾನೆಟ್ʼ ಸಂಪರ್ಕಿಸಿದಾಗ ಅವರು, ʼಮೃತ ವ್ಯಕ್ತಿ ಆರೋಗ್ಯ ಸಮಸ್ಯೆ ಹೊಂದಿದ್ದರು. ಅವರ ಮೇಲೆ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು ಒಂದು ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು. ಅವರಿಗೆ ಪಡಿತರ ಚೀಟಿ ಇಲ್ಲ ಎಂದಾಗಲೀ, ತಮಗೆ ಸಿದ್ದಿ ಫುಡ್ ಕಿಟ್ ಸಿಗುತ್ತಿಲ್ಲ ಎಂದಾಗಲೀ ಅವರು ಯಾರ ಬಳಿಯೂ ಹೇಳಿಕೊಂಡಿಲ್ಲ. ಹೀಗಾಗಿ ಇದು ವಾಸ್ತವ ಅಲ್ಲದಿರುವ ಸಾಧ್ಯತೆ ಇದೆʼ ಎಂದರು.
ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮಾಜಿ ಜಾನಪದ ಅಕಾಡೆಮಿ ಸದಸ್ಯೆ ಜೂಲಿಯಾನಾ ಸಿದ್ಧಿ ಸಹ, ʼನೆನ್ನೆ ನಾವು ಶಾಂತಾರಾಮ ಸಿದ್ದಿಎಲ್ಲರೂ ಕೂಡಿ ಮಾತಾಡಿದೆವು. ಆ ಮಹಿಳೆಗೆ ಪಡಿತರ ಆಹಾರವಿಲ್ಲದೆ ಹಸಿವಿನಿಂದ ಸತ್ತಿರುವ ಯಾವುದೇ ವಿಷಯ ಚರ್ಚೆ ಆಗಿರಲಿಲ್ಲ. ಆದರೆ ಗಂಭೀರ ಖಾಯಿಲೆಯಿಂದ ಅವರು ನರಳುತ್ತಿದ್ದು ನೋವನ್ನು ಸಹಿಸದೇ ಸತ್ತಿರುವ ಕುರಿತು ಎಲ್ಲರಿಗೂ ಮಾಹಿತಿ ತಿಳಿದಿತ್ತು. ಇಂದು ಶಾಂತಾರಾಮ ಸಿದ್ದಿ ಅವರು ಹೀಗೆ ಹೇಳಿರುವುದು ಆಶ್ಚರ್ಯಕರ ಎಂದರು. ನಮ್ಮ ಸಿದ್ದಿ ಸಮುದಾಯದಲ್ಲಿ ಹಿಂದೆ ಹಸಿವಿನಿಂದ ನರಳುವ ಪರಿಸ್ಥಿತಿ ಇದ್ದಿದ್ದು ನಿಜ. ಆದರೆ ಇಂದು ಹಾಗೆ ಇಲ್ಲ. ವಿಶೇಷವಾಗಿ ಸಿದ್ದರಾಮಯ್ಯ ಸರ್ಕಾರ ವರ್ಷವಿಡೀ ಸಿದ್ದಿ ಫುಡ್ ಕಿಟ್ ಕೊಡುವಂತೆ ಮಾಡಿರುವುದರಿಂದ ಯಾರೊಬ್ಬರೂ ಹಸಿವಿನಿಂದ ನರಳುವ ಪರಿಸ್ಥಿತಿ ಇಲ್ಲ. ನಮ್ಮ ಸಮುದಾಯದ ಎಲ್ಲರಿಗೂ ವಿಶೇಷ ಪೌಷ್ಠಿಕ ಆಹಾರವೇ ಸಿಗುತ್ತಿದೆ. ಆಹಾರ ಹೆಚ್ಚಾಗಿ ಯಾರಾದರೂ ಸಾಯಬಹುದೇ ವಿನಃ ಹಸಿವಿನಿಂದ ನರಳುವ ಸ್ಥಿತಿ ಇಲ್ಲʼ ಎಂದು ಅವರು ಹೇಳಿದರು.
ʼಯಲ್ಲಾಪುರದ ಹೆಸರು ಹೇಳಲಿಚ್ಚಿಸದ ಸಿದ್ಧಿ ಯುವಕರೊಬ್ಬರು ಈ ಕುರಿತು ಮಾತನಾಡಿ, ʼಬಿಜೆಪಿಯ ಹರಿಪ್ರಕಾಶ್ ಕೋಣೆಮನೆಯವರು ನಮ್ಮ ಸಮುದಾಯದ ಶಾಂತಾರಾಮ ಸಿದ್ದಿಯವರಿಂದ ಹೀಗೆ ಹೇಳಿಸಿದ್ದಾರೆ. ಇದರ ಹಿಂದೆ ರಾಜಕೀಯ ಉದ್ದೇಶದೆ. ಆದರೆ ಸಿದ್ದಿ ಸಮುದಾಯದ ಮಹಿಳೆ ಹಸಿವಿನಿಂದ ಸತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರದ ಸಂಗತಿ ಎಂದರು.