ಬೆಂಗಳೂರು: ಪ್ರದೇಶ ಕಾಂಗ್ರಸ್ ಕಚೇರಿಯಲ್ಲಿ ಇಂದು ಕ್ವಿಟ್ ಇಂಡಿಯಾ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಸಚಿವರಾದ ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯಸಚೇತಕರಾದ ಸಲೀಂ ಅಹ್ಮದ್, ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವೆ ಮಾಜಿ ಸಚಿವೆ ರಾಣಿ ಸತೀಶ್, ಬಿ.ಟಿ ಲಲಿತಾ ನಾಯಕ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಜಿ.ಸಿ. ಚಂದ್ರಶೇಖರ್ ಮಾತನಾಡಿ “ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪರಿಣಾಮಕಾರಿಯಾಗಿ ಪ್ರತಿಭಟನೆ ನಡೆಸಿದೆ. ನಿನ್ನೆ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬಂದು, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ವಾಕ್ ಸ್ವಾತಂತ್ರ್ಯ ಕಳೆದುಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ ಎಂದರೆ ನಾವು ಪಶ್ಚಾತಾಪ ಪಡಬೇಕು. ರಾಹುಲ್ ಗಾಂಧಿ ಅವರ ಮೇಲೆ ಬಿಜೆಪಿ ಸರ್ಕಾರ 51 ಪ್ರಕರಣ ದಾಖಲಿಸಿದೆ. ಒಂದು ದೇಶದ ವಿರೋಧ ಪಕ್ಷದ ನಾಯಕನ ಮಾತನಾಡುವ ಹಕ್ಕನ್ನು ಕಸಿಯುವ ಹಂತಕ್ಕೆ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಈಗ ಎಂತಹ ಚಳವಳಿ ಮಾಡಬೇಕು ಎಂದು ಅರಿಯಬೇಕು ಎಂದರು.
ಮತದಾನದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕರು ಕೆಲವು ಇತರೆ ಕ್ಷೇತ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಈ ಅಕ್ರಮಗಳು ಯಾವುದೇ ಕ್ಷೇತ್ರದಲ್ಲಿ ನಡೆದಿರಲಿ, ಎಲ್ಲಾ ಕಡೆ ತನಿಖೆ ನಡೆಯಲಿ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ಜೊತೆಗೂಡಿ ಬಿಜೆಪಿ ನಡೆಸಿದೆ. ಚುನಾವಣೆ ಪಾರದರ್ಶಕವಾಗಿ ನಡೆದು 25 ಕ್ಷೇತ್ರಗಳು ಹೆಚ್ಚು ಕಮ್ಮಿಯಾಗಿದ್ದರೂ ಇಂದು ದೇಶದಲ್ಲಿ ನರೇದ್ರ ಮೋದಿ ಅವರು ಪ್ರಧಾನಿಯಾಗಿರುತ್ತಿರಲಿಲ್ಲ. ಹೀಗಾಗಿ ಚುನಾವಣಾ ಆಯೋಗ ಬಳಸಿಕೊಳ್ಲಲಾಗಿದೆ. ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೇಶಕ್ಕೆ ಗೊತ್ತಿದೆ. ಯಾವುದೇ ಹಳ್ಳಿಗೆ ಹೋದರೂ ವಿರೋಧ ಪಕ್ಷಗಳ ಕೇಂದ್ರ ಸರ್ಕಾರ ಈ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತದೆ ಎಂಬ ವಿಚಾರ ಗೊತ್ತಿದೆ. ಈ ದಾಳಿಗೆ ಒಳಗಾದವರು ಬಿಜೆಪಿ ಸೇರಿಕೊಂಡರೆ ಅವರ ಆರೋಪ ಖುಲಾಸೆಯಾಗಿ ಅವರಿಗೆ ಉನ್ನತ ಹುದ್ದೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಆ ಮೂಲಕ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಪಾಯವನ್ನೇ ಅಲುಗಾಡಿಸುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧ ಈಗ ನಾವು ಹೋರಾಡದೇ ಇದ್ದರೆ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದ ಜನ ಸಾಮಾನ್ಯರು ನಲುಗುತ್ತಿದ್ದಾರೆ. ಈ ದೇಶದಲ್ಲಿ ಯಾವುದಕ್ಕೂ ಹೆದರದೇ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ವ್ಯಕ್ತಿ ಎಂದರೆ ಅದು ರಾಹುಲ್ ಗಾಂಧಿ ಎಂದು ಹೇಳಿದರು.
ಮತಗಳ್ಳತನ ತಡೆಯಲು ನಾವು ಈಗಾಗಲೇ 5 ಸಮಿತಿಗಳನ್ನು ಮಾಡಿದ್ದೇವೆ. ನಾಗರಾಜ ಯಾದವ್, ಐವರು ವಿಧಾನಪರಿಷತ್ ಸದಸ್ಯರು, ಮಾಜಿ ಮೇಯರ್, ಆಡಳಿತ ಪಕ್ಷದ ನಾಯಕರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಅವರು ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮತದಾನದ ಅಕ್ರಮವನ್ನು ಗಮನ ಹರಿಸಲಿದ್ದಾರೆ. ಯಾರಾದರೂ ಮತಗಳ್ಳತನ ದೊಡ್ಡ ಸಮಸ್ಯೆಯಲ್ಲ ಎಂದು ಭಾವಿಸಿದರೆ ಅದು ಅವರ ದಡ್ಡತನ. ರಾಜಕೀಯದಲ್ಲಿ 49, ಶೂನ್ಯಕ್ಕೆ ಹಾಗೂ 51, ನೂರಕ್ಕೆ ಸಮ. ಹೀಗಾಗಿ ಈ ಅಂಕಿಗಳ ಆಟವನ್ನು ಹೇಗೆ ಆಡಬೇಕು ಎಂದು ಬಿಜೆಪಿಯವರಿಗೆ ಗೊತ್ತಿದೆ. ಅವರಿಗೆ ಚುನಾವಣೆ ಗೆಲ್ಲುವುದು ಗೊತ್ತೇ ಹೊರತು, ಆಡಳಿತ ಹೇಗೆ ಮಾಡಬೇಕು ಎಂಬುದು ಗೊತ್ತಿಲ್ಲ.
ಕೇಂದ್ರ ಬಿಜೆಪಿಯವರು ಅಮೆರಿಕ ಅಧ್ಯಕ್ಷರನ್ನು ತೆಲೆ ಮೇಲೆ ಹೊತ್ತು ತಿರುಗಿದರು. ಆದರೆ ಇಂದು ಅವರಿಂದ ದೇಶಕ್ಕೆ ಆಗುತ್ತಿರುವ ಅನ್ಯಾಯ ತಡೆಯಲು ಆಗುತ್ತಿಲ್ಲ. ಪರಿಣಾಮ ಟೀಕೆ ಮಾಡುತ್ತಿದ್ದ ಚೀನಾಗೆ ಪ್ರವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಮಂತ್ರಿಗಳು ದೇಶದ ಹಿತಕ್ಕೆ ಕೆಲಸ ಮಾಡಬೇಕೇ ಹೊರತು, ಸ್ವಂತ ಹಿತಕ್ಕಾಗಿ ಅಲ್ಲ ” ಎಂದು ತಿರುಗೇಟು ನೀಡಿದರು.