ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮಾಡಿದ ಶವಗಳನ್ನು ಹೂತು ಹಾಕಿರುವುದಾಗಿ ಎಸ್ ಐಟಿಗೆ ದೂರು ನೀಡಿರುವ ವ್ಯಕ್ತಿಯನ್ನು ನಾವು ಗುರುತಿಸಬಲ್ಲರಾಗಿದ್ದೇವೆ. ಗುಪ್ತವಾಗಿ ಯಾರಿಗೂ ಕಾಣದಂತೆ ಆತ ಗ್ರಾಮದ ವಿವಿಧ ಭಾಗಗಳಲ್ಲಿ ಶವಗಳನ್ನು ಸಾಗಿಸಿ ಹೂತುಹಾಕಿರುವುದನ್ನು ನಾವು ಕಂಡಿದ್ದೇವೆ ಎಂದು ಮತ್ತಿಬ್ಬರು ಧರ್ಮಸ್ಥಳ ನಿವಾಸಿಗಳು ಎಸ್‌ಐಟಿಗೆ ದೂರು ನೀಡಿದ್ದಾರೆ. ಎಸ್ ಐಟಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಹೆಣಗಳನ್ನು ಹೂತು ಹಾಕಿರುವ ವಾದಕ್ಕೆ ಪುಷ್ಠಿ ದೊರೆತಂತಾಗಿದೆ.
ಅನಾಮಿಕ ವ್ಯಕ್ತಿ ರಹಸ್ಯವಾಗಿ ಶವಗಳನ್ನು ಹೂತು ಹಾಕಿರಬಹುದು. ಆದರೆ ಗ್ರಾಮದಲ್ಲಿ ಆ ವಿಷಯ ರಹಸ್ಯವಾಗಿ ಉಳಿಯುವುದಿಲ್ಲ. ಒಬ್ಬರಿಂದ ಒಬ್ಬರಿಗೆ ತಿಳಿಯುತ್ತಾ ಹೋಗುತ್ತದೆ. ಇದೀಗ ಸರ್ಕಾರ ಎಸ್ ಐಟಿ ರಚಿಸಿದ್ದು, ನಾವು ಸಹಕಾರ ನೀಡಲು ಸಿದ್ಧರಿದ್ಧೇವೆ ಎಂದು ಹೇಳಿದ್ದಾರೆ.
ನಾವು ನೋಡಿರುವ, ರಹಸ್ಯವಾಗಿ ಹೆಣಗಳನ್ನು ಹೂತುಹಾಕುತ್ತಿದ್ದ ಸ್ಥಳಗಳನ್ನು ತೋರಿಸಲು ಸಿದ್ಧರಿದ್ದೇವೆ. ಆದ್ದರಿಂದ ದೂರುದಾರ ತೋರುತ್ತಿರುವ ಸ್ಥಳಗಳಲ್ಲಿ ಮೃತದೇಹಗಳ ಅವಶೇಷಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ನಮ್ಮನ್ನೂ ಭಾಗಿಯಾಗಿಸಿಕೊಳ್ಳಬೇಕು ಎಂದು ತನಿಖಾ ತಂಡಕ್ಕೆ ಮನವಿ ಮಾಡಿಕೊಂಡಿದ್ಧೇವೆ ಎಂದು ಅವರು ತಿಳಿಸಿದ್ದಾರೆ.