ಭಾರತದ ಸರಕುಗಳ ಮೇಲೆ ಶೇ. 50 ಸುಂಕ ಹೆಚ್ಚಿಸಿದ ಡೊನಾಲ್ಡ್‌ ಟ್ರಂಪ್;‌ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಕ್ಷೇಪ

Most read

ನವದೆಹಲಿ: ಭಾರತದಿಂದ ಆಮದಾಗುವ ಸರಕುಗಳ ಮೇಲೆ ಹೆಚ್ಚುವರಿ ಶೇ. 25 ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಶೇ. 50ರಷ್ಟು ಸುಂಕ ವಿಧಿಸುವ ಮೂಲಕ ಟ್ರಂಪ್‌ ಅವರು ಆರ್ಥಿಕ ಬೆದರಿಕೆ ಒಡ್ಡುತ್ತಿದ್ದಾರೆ. ಅನ್ಯಾಯದ ವ್ಯಾಪಾರ ಒಪ್ಪಂದಕ್ಕೆ ಭಾರತವನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ತಮ್ಮ ದೌರ್ಬಲ್ಯವು ಭಾರತೀಯ ಜನರ ಹಿತಾಸಕ್ತಿಗಳನ್ನು ಮೀರಿಸಲು ಬಿಡಬಾರದು ಎಂದಿದ್ದಾರೆ.

ಕಾಂಗ್ರೆಸ್‌ ನಾಯಕ ಪವನ್ ಖೇರಾ ಪ್ರತಿಕ್ರಿಯಿಸಿ, ಇದು ಅಮೆರಿಕದ ಶುದ್ಧ ಮತ್ತು ಸರಳ ಬೆದರಿಕೆಯ ತಂತ್ರ ಎಂದು ವ್ಯಾಖ್ಯಾನಿಸಿದ್ದಾರೆ.

ಟ್ರಂಪ್ ಗೆ ಕೋಪ ಏಕೆ?:

ಡೊನಾಲ್ಡ್‌ ಟ್ರಂಪ್‌ ಅವರು ಆಗಸ್ಟ್ 1ರಿಂದ ಅನ್ವಯವಾಗುವಂತೆ ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ್ದರು. ಭಾರತವು ರಷ್ಯಾದೊಂದಿಗೆ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕೆ ಪ್ರತೀಕಾರವಾಗಿ ಹೆಚ್ಚುವರಿ ಶೇ 25ರಷ್ಟು ಸುಂಕ ವಿಧಿಸುವ ಮೂಲಕ ಸುಂಕವನ್ನು ಶೇ 50ಕ್ಕೆ ಏರಿಕೆ ಮಾಡಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಬಗ್ಗಿರಲಿಲ್ಲ. ಇದರಿಂದ ಕೆರಳಿದ ಡೊನಾಲ್ಡ್‌ ಟ್ರಂಪ್‌ ಅಮೆರಿಕ ಭಾರತದಿಂದ ಆಮದು ಮಾಡಿ ಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ಹೇರುವ ಆದೇಶಕ್ಕೆ ನಿನ್ನೆ ಸಹಿ ಹಾಕಿದ್ದಾರೆ. 

ವಿನಾಯಿತಿ ಪಟ್ಟಿಯಲ್ಲಿರುವ ಕೆಲವು ಸರಕುಗಳನ್ನು ಹೊರತುಪಡಿಸಿ ಭಾರತದ ಮೇಲೆ ಹೇರಲಾದ ಸುಂಕದ ಪ್ರಮಾಣ ಶೇ. 50ಕ್ಕೆ ಏರಿದಂತಾಗಿದೆ. ಟ್ರಂಪ್‌ ಅವರ ಈ ಆದೇಶದಿಂದ ಜವಳಿ, ಸಾಗರ ಹಾಗೂ ಚರ್ಮ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾರತದಿಂದ ಅಮೆರಿಕಕ್ಕೆ ರೂ.7.5 ಲಕ್ಷ ಕೋಟಿ (86 ಶತ ಕೋಟಿ ಡಾಲರ್) ಮೌಲ್ಯದಷ್ಟು ಸರಕುಗಳ ರಫ್ತಾಗುತ್ತಿದೆ.  ಹೆಚ್ಚುವರಿ ಸುಂಕ ಈ ರಫ್ತಿನ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.

More articles

Latest article