ಬೆಂಗಳೂರು: ಲಾಲ್ ಬಾಗ್ ನಲ್ಲಿ ಆಗಸ್ಟ್ 7ರಿಂದ 18ರವರೆಗೆ ನಡೆಯಲಿರುವ ಈ ಭಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ವಿಶೇಷ ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ .
ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಫಲಪುಷ್ಪ ಪ್ರದರ್ಶನದ ವಿವರ ನೀಡುತ್ತಾ ಈ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ಪುಷ್ಪ ಗೌರವ ಸಲ್ಲಿಸಲಾಗುತ್ತಿದೆ. ಈ ಇಬ್ಬರು ಮಹನೀಯರ ಜೀವನ, ಸಾಧನೆ, ಹೋರಾಟದ ಹಾದಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಕಿತ್ತೂರಿನ ಐತಿಹಾಸಿಕ ಕೋಟೆಯನ್ನೂ ಹೂವುಗಳಲ್ಲಿ ಸೆರೆಹಿಡಿಯಲಾಗುತ್ತದೆ ಎಂದರು.
ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ನಡೆಯಲಿರುವ 218ನೇ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೂ ಭಾಗವಹಿಸಲಿದ್ದಾರೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಮಾತನಾಡಿ, ಗಾಜಿನ ಮನೆಯಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಕಾರ್ಯಕ್ಷೇತ್ರವಾಗಿದ್ದ ಕಿತ್ತೂರು ಕೋಟೆ ಮಾದರಿಯು ಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ. ಇದು 18 ಅಡಿ ಎತ್ತರ 34 ಅಡಿ ಸುತ್ತಳತೆಯನ್ನು ಹೊಂದಿದೆ. ಹಸಿರು, ಬಿಳಿ, ಕಂದು ಹಾಗೂ ಗುಲಾಬಿ ವರ್ಣದ 1.5 ಲಕ್ಷ ಡಚ್ ಗುಲಾಬಿ ಹೂವು, 1.5 ಲಕ್ಷ ಹೈಬ್ರೀಡ್ ಸೇವಂತಿಗೆ ಹಾಗೂ 30 ಸಾವಿರ ಕೋಲ್ಕತ್ತ ಸೇವಂತಿಗೆ ಹೂವುಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ರಾಣಿ ಚನ್ನಮ್ಮ ಅವರು ಕುದುರೆಯ ಮೇಲೆ ಖಡ್ಗ ಹಿಡಿದು ಕುಳಿತಿರುವ ಹಾಗೂ ಸಂಗೊಳ್ಳಿ ರಾಯಣ್ಣ ಅವರು ಖಡ್ಗ ಹಿಡಿದುಕೊಂಡು ನಿಂತಿರುವ ಬೃಹತ್ ಪ್ರತಿಮೆಗಳು ರಾರಾಜಿಸಲಿವೆ ಎಂದರು.
ಅಶ್ವಾರೂಢ ಸಂಗೊಳ್ಳಿ ರಾಯಣ್ಣನ ಪ್ರತಿಮೆ, ರಾಯಣ್ಣ ಹುತಾತ್ಮರಾದ ಸನ್ನಿವೇಶ ಮತ್ತು ರಾಣಿ ಚನ್ನಮ್ಮನವರ ಐಕ್ಯ ಸ್ಮಾರಕ, ರಾಣಿ ಅಬ್ಬಕ್ಕ ದೇವಿ, ಚೆನ್ನಾ ಭೈರಾದೇವಿ, ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ವೀರಮ್ಮಾಜಿ, ಒನಕೆ ಓಬವ್ವನವರ ಪ್ರತಿಮೆಗಳು ಇರಲಿವೆ. ಕೋಟೆ ವಿನ್ಯಾಸ ವರ್ಟಿಕಲ್ ಗಾರ್ಡನ್ ಮಾದರಿ, ರಾಷ್ಟ್ರ ಲಾಂಛನ ಹಾಗೂ ಜಾನಪದ ಕಲಾವಿದರ ಕಲಾಕೃತಿಗಳು ಇರಲಿವೆ ಎಂದರು.