ಪ್ರಧಾನಿ ಮೋದಿಯ ರೈತ ವಿರೋಧಿ ನೀತಿಗಳ ಕಟು ಟೀಕಾಕಾರ, ಮಾಜಿ ರಾಜ್ಯಪಾಲ ಸತ್ಯಪಾಲ್‌  ಮಲಿಕ್‌ ನಿಧನ

Most read

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇಂದು ನಿಧನರಾಗಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗಲೇ ಪ್ರಧಾನಿ ಮೋದಿ ಅವರ ರೈತ ವಿರೋಧಿ ನೀತಿಗಳನ್ನು ಖಂಡಿಸಿದ್ದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ  79 ವರ್ಷದ ಮಲಿಕ್‌ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 1.10 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಸತ್ಯಪಾಲ್‌ ಮಲಿಕ್ ಅವರು ಆಗಸ್ಟ್ 2018 ರಿಂದ ಅಕ್ಟೋಬರ್ 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ 370 ನೇ ವಿಧಿಯನ್ನು ರದ್ದುಗೊಂಡಿತ್ತು. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

ಐದು ದಶಕಗಳಿಗೂ ಹೆಚ್ಚು ಕಾಲ ರಾಜಕಾರಣದಲ್ಲಿದ್ದ ಮಲಿಕ್‌ ಅವರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. ಮಾಜಿ ಪ್ರಧಾನಿ ಚರಣ್ ಸಿಂಗ್ ಸ್ಥಾಪಿಸಿದ ಭಾರತೀಯ ಕ್ರಾಂತಿ ದಳ ಸೇರಿ ಬಾಗ್‌ಪತ್‌ನಿಂದ  ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 1980 ಮತ್ತು 1989 ರ ನಡುವೆ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. 1989 ರಲ್ಲಿ ಜನತಾ ದಳದ ಟಿಕೆಟ್‌ನಲ್ಲಿ ಅಲಿಗಢದಿಂದ ಲೋಕಸಭೆಗೆ ಆಯ್ಕೆಯಾದರು.

2017 ರಲ್ಲಿ ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ 2018 ರಲ್ಲಿ ಒಡಿಶಾದ ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದರು.

ಪ್ರಧಾನಿ ಮೋದಿ ಅವರ ಕಟ್ಟಾ ಬೆಂಬಲಿಗರಾಗಿದ್ದ ಮಲಿಕ್‌ ಅವರು ಕಾಲಕ್ರಮೇಣ ಅವರ ವಿರುದಧವೇ ತಿರುಗಿ ಬಿದ್ದಿದ್ದರು. ಜಮ್ಮು ಮತ್ತು ಕಾಶ್ಮೀರದಿಂದ ಗೋವಾ ರಾಜ್ಯಕ್ಕೆ ವರ್ಗಾಯಿಸಿದಾಗ ಅವರು ಮತ್ತಷ್ಟು ಕಠಿಣ ವಾಗಿ ವರ್ತಿಸತೊಡಗಿದರು. ಪ್ರಧಾನಿ ಮೋದಿ ವಿರುದ್ಧವೇ ಹೇಳಿಕೆ ನೀಡಲು ಆರಂಭಿಸಿದ್ದರು. ಪ್ರಧಾನಿ ಮೋದಿ ಸರ್ಕಾರದ ರೈತ ವಿರೋಧಿ ನೀತಿಗಳಿಗೆ ಬಲಿಯಾದ ರೈತರ ಕಲ್ಯಾಣ ಮತ್ತು ಹಕ್ಕುಗಳಿಗಾಗಿ ಹೋರಾಡಲು ಬಯಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೊದಲು ಸತ್ಯಪಾಲ್ ಮಲಿಕ್ ಅವರು ಆರ್‌ಎಲ್‌ಡಿ ಮತ್ತು ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದರು.ನನಗೆ ಸಕ್ರಿಯ ರಾಜಕೀಯಕ್ಕೆ ಸೇರುವ ಉದ್ದೇಶವಿಲ್ಲ,ಆದರೆ  ಆರ್‌ಎಲ್‌ಡಿ ಮತ್ತು ಎಸ್‌ಪಿಗೆ ಮಾರ್ಗದರ್ಶಕನಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದಿದ್ದರು.

More articles

Latest article