ಧರ್ಮಸ್ಥಳ ಹತ್ಯೆಗಳು: 11ನೇ ಸ್ಥಳದಲ್ಲಿ ಉತ್ಖನನ ಆರಂಭ: ಸಿಗಲಿವೆಯೇ ಕುರುಹುಗಳು?

Most read

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತದೇಹಗಳ ಅವಶೇಷ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಮಂಗಳವಾರ 7ನೇ ದಿನಕ್ಕೆ ಕಾಲಿಟ್ಟಿದೆ. ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯದಲ್ಲಿ ಅನಾಮಿಕ ಸಾಕ್ಷಿ ದೂರುದಾರ ಈ ಹಿಂದೆ ಗುರುತಿಸಿದ್ದ 11ನೇ ಸ್ಥಳದಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ)ದ ನೇತೃತ್ವದಲ್ಲಿ  ಅಗೆಯುವವ ಕಾರ್ಯ ಆರಂಭವಾಗಿದೆ.

ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 11ನೇ ಸ್ಥಳಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ನೆಲದಲ್ಲೇ ಅವಶೇಷಗಳು ಸಿಕ್ಕಿರುವುದು ಕುತೂಹಲ ಮೂಡಿಸಿದೆ. ಅಲ್ಲಿ ಒಂದು ತಲೆಬುರುಡೆ, ಉದ್ದನೆಯ ಬೆನ್ನುಮೂಳೆಯೂ ಸೇರಿ ಸೇರಿ ನೂರು ಮೂಳೆಗಳು ಸಿಕ್ಕಿವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಸ್ಥಳದಲ್ಲಿದ್ದ ತಜ್ಞರ ತಂಡವು ಅವುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.  ಅದೇ ಸ್ಥಳದಲ್ಲಿ ಗಂಟು ಹಾಕಿರುವ ಸೀರೆಯೊಂದು ಸಿಕ್ಕಿದೆ.

ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದರು.

ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಅವಶೇಷ ಗುರುವಾರ ಪತ್ತೆಯಾಗಿತ್ತು. ಉಳಿದ ಒಂಬತ್ತು ಜಾಗಗಳ ಮೃತದೇಹಗಳ ಯಾವುದೇ ಅಸ್ಥಿಪಂಜರ ಸಿಕ್ಕಿರಲಿಲ್ಲ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ್ದರು. ಈ ದೂರಿನನ್ವಯ  ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಜುಲೈ 19 ರಂದು ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತ್ತು.

More articles

Latest article