ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡುವುದನ್ನು ತಡೆಹಿಡಿಯುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಈ ಮಹತ್ವದ ತೀರ್ಪು ನೀಡುವ ಮೂಲಕ ಪ್ರಕರಣಕ್ಕೆ ಮುಕ್ತವಾಗಿ ವರದಿ ಮಾಡಲು ಮಾಧ್ಯಮಗಳಿಗೆ ಅವಕಾಶ ಸಿಕ್ಕಂತಾಗಿದೆ.
ಡಿ. ಹರ್ಷೇಂದ್ರ ಕುಮಾರ್ ಅವರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜುಲೈ 8, 2025 ರಂದು ಪ್ರತಿಬಂಧಕ ಆದೇಶವನ್ನು ನೀಡಿತ್ತು. ಈ ಏಕಪಕ್ಷೀಯ ಪ್ರತಿಬಂಧಕ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ.
ದಕ್ಷಿಣ ಕನ್ನಡದ ‘ಕುಡ್ಲ ರ್ಯಾಂಪ್ ಪೇಜ್’ ಯೂ ಟ್ಯೂಬ್ ಚಾನೆಲ್ನ ಪ್ರಧಾನ ಸಂಪಾದಕ ಅಜಯ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಆದೇಶವನ್ನು ಹೊರಡಿಸಿದೆ. ಈ ಮಧ್ಯಂತರ ಅರ್ಜಿಯನ್ನು ಹೊಸದಾಗಿ ಮತ್ತು ನ್ಯಾಯಯುತವಾಗಿ ಪರಿಗಣಿಸುವಂತೆ ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ವಿಚಾರಣಾ ನ್ಯಾಯಾಲಯವು ಈ ಆದೇಶದಲ್ಲಿರುವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು ಎಂದು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವೊದಗಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದಾಗ ಹರ್ಷೇಂದ್ರ ಕುಮಾರ್ ಅವರು ತಮ್ಮ ವಿರುದ್ಧ ಮಾಧ್ಯಮಗಳು ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ನ್ಯಾಯಲಯದ ಮೊರೆ ಹೋಗಿದ್ದರು.
ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅವರು ಪ್ರಕರಣ ದಾಖಲಿಸಿ ತಮ್ಮ ಕುಟುಂಬ ಮತ್ತು ಕುಟುಂಬದ ಸಂಸ್ಥೆಗಳ ವಿರುದ್ಧ ಆನ್ ಲೈನ್, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿಗಳನ್ನು ಪ್ರಸಾರ ಮಾಡುವುದನ್ನು ತಡೆಯುವಂತೆ ಕೋರಿದ್ದರು. ಈ ದಾವೆಯ ವಿಚಾರಣೆ ನಡೆಸಿದ ಸೆಷೆನ್ಸ್ ನ್ಯಾಯಾಲಯವು, ಡಿಜಿಟಲ್, ಸಾಮಾಜಿಕ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಿಷಯ ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳು ಮತ್ತು ಇತರ ವ್ಯಕ್ತಿಗಳಿಗೆ ಏಕಪಕ್ಷೀಯವಾಗಿ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು.
ಈ ಆದೇಶವು ಮಾಧ್ಯಮದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ವಾದಿಸಿ, ಕುಡ್ಲ ರ್ಯಾಂಪ್ ಪೇಜ್ ಯೂಟ್ಯೂಬ್ ಚಾನೆಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಆದೇಶದಿಂದಾಗಿ, ಈ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ನಿರ್ಭೀತಿಯಿಂದ ಮಾಧ್ಯಮಗಳು ವರದಿ ಮಾಡಬಹುದಾಗಿದೆ.