ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೇ ಸದನದಲ್ಲಿ ಮೊಬೈಲ್ ನಲ್ಲಿ ರಮ್ಮಿ ಆಡುತ್ತಾ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಣಿಕ್ ರಾವ್ ಕೊಕಾಟೆ ಅವರಿಗೆ ಹಿಂಬಡ್ತಿ ನೀಡಲಾಗಿದೆ. ಕೃಷಿ ಖಾತೆಯನ್ನು ನಿಭಾಯಿಸುತ್ತಿದ್ದ ಅವರಿಗೆ ಕ್ರೀಡೆ, ಯುವಜನ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ವಕ್ಫ್ ಖಾತೆ ನೀಡಲಾಗಿದೆ. ಕೃಷಿ ಖಾತೆಯನ್ನು ಎನ್ ಸಿಪಿಯ ದತ್ತಾತ್ರೇಯ ಭರ್ನೆ ಅವರಿಗೆ ವಹಿಸಲಾಗಿದೆ.
ಎನ್ ಸಿಪಿ ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಈ ಕ್ರಮ ಕೈಗೊಂಡಿದ್ದದಾರೆ.
ಕೊಕಾಟೆ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಮತ್ತು ಮುಂದೆ ಇಂತಹ ವರ್ತನೆ ತೋರುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಮುಂದುವರಿಯಲು ಅಜಿತ್ ಪವಾರ್ ಸಮ್ಮತಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಕೊಕಾಟೆಗೆ ಹಲವು ಬಾರಿ ಪವಾರ್ ಎಚ್ಚರಿಕೆಯನ್ನೂ ನೀಡಿದ್ದರು. ಇವರ ಹೇಳೀಕೆಗಳಿಂದ ಪಕ್ಷ ಮತ್ತು ಸರ್ಕಾರ ಹಲವು ಬಾರಿ ಮುಜುಗರಕ್ಕ್ಕೀಡಾಗಿತ್ತು. ಇವರ ವಿರುದ್ಧ ಕ್ರಮ ಜರುಗಿಸುವಂತೆ ದೇವೇಂದ್ರ ಫಡ್ನವೀಸ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಈ ಕ್ರಮ ಜರುಗಿಸಿದ್ದಾರೆ.