Wednesday, December 10, 2025

ಧರ್ಮಸ್ಥಳ ಪ್ರಕರಣದ ತಡೆಯಾಜ್ಞೆ ತೆರವು ಸಂಬಂಧ ಸಿಟಿ ಸಿವಿಲ್ ಕೋರ್ಟ್ ನಲ್ಲಿ  ವಾದ ಮಂಡನೆ

Most read

·         ಪತ್ರಕರ್ತ, ಹೋರಾಟಗಾರರ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ವಾದ

·         ತಡೆಯಾಜ್ಞೆ ಪ್ರಶ್ನಿಸಿದ ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಬೈರಪ್ಪ ಹರೀಶ್ ಕುಮಾರ್

ಬೆಂಗಳೂರು : ಧರ್ಮಸ್ಥಳದ ಬಗೆಗಿನ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಬೆಂಗಳೂರಿನ 26 ನೇ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತಡೆಯಾಜ್ಞೆಗೆ ಆಕ್ಷೇಪಣೆ ಸಲ್ಲಿಸಿ, ತಡೆಯಾಜ್ಞೆ ತೆರವುಗೊಳಿಸುವಂತೆ ಹಿರಿಯ ವಕೀಲ ಎಸ್ ಬಾಲನ್ ಅರ್ಜಿ ಸಲ್ಲಿಸಿದ್ದಾರೆ. 338 ಪತ್ರಕರ್ತರು, ಹೋರಾಟಗಾರರು, ಸಂಸ್ಥೆಗಳು ಮತ್ತು ಅಧೃಶ್ಯ ವ್ಯಕ್ತಿ ಸೇರಿದಂತೆ ಒಟ್ಟು 339 ಪ್ರತಿವಾದಿಗಳ ವಿರುದ್ಧ ತಡೆಯಾಜ್ಞೆ ನೀಡಲಾಗಿತ್ತು. ಈ ಪೈಕಿ 25 ನೇ ಪ್ರತಿವಾದಿ ಪತ್ರಕರ್ತ ನವೀನ್ ಸೂರಿಂಜೆ, 33 ನೇ ಪ್ರತಿವಾದಿ ಹೋರಾಟಗಾರ ಮುನೀರ್ ಕಾಟಿಪಳ್ಳ, 49 ನೇ ಪ್ರತಿವಾದಿ ಕನ್ನಡ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ಪರವಾಗಿ ಎಸ್ ಬಾಲನ್ ಸತತ ಮೂರನೇ ದಿನ ವಾದ ಮಂಡಿಸಿದರು.

‘ಈ ಆದೇಶವು ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ. ಸಾಮೂಹಿಕವಾದ ತಡೆಯಾಜ್ಞೆಯನ್ನು ನೀಡಬಾರದು ಎಂದು ಹಲವಾರು ಹೈಕೋರ್ಟ್, ಸುಪ್ರಿಂ ಕೋರ್ಟ್ನ ತೀರ್ಪುಗಳು ಹೇಳಿವೆ. ಆರ್ಜಿದಾರರಾಗಿರುವ ಹರ್ಷೇಂದ್ರ ಕುಮಾರ್ ಕುರಿತಾಗಿ ಯಾರೂ ಕೂಡಾ ಸುದ್ದಿಯನ್ನೇ ಪ್ರಸಾರ ಮಾಡಿಲ್ಲ. ಹರ್ಷೇಂದ್ರ ಕುಮಾರ್ ಅವರ ಸಹೋದರರಾಗಿರುವ ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿದ್ದು, ಅವರೀಗ ಸಾರ್ವಜನಿಕ ಉತ್ತರದಾಯಿ ಆಗಿದ್ದಾರೆ. ಹಾಗಾಗಿ ಅವರಿಗೆ ಪ್ರಶ್ನೆ ಕೇಳುವುದು ಜನರ ಹಕ್ಕು ಆಗಿರುತ್ತದೆ. ವಿರೇಂದ್ರ ಹೆಗ್ಗಡೆಯವರಿಗೆ ಪತ್ರಕರ್ತರು, ಹೋರಾಟಗಾರರು ಕೇಳಿದ ಪ್ರಶ್ನೆ ಮಾನಹಾನಿ ಹೇಗಾಗುತ್ತದೆ ? ವಿರೇಂದ್ರ ಹೆಗ್ಗಡೆಯ ಮಾನಹಾನಿ ಆಗಿದ್ದರೆ ಅವರನ್ನೂ ಈ ಪ್ರಕರಣದಲ್ಲಿ ವಾದಿ ಎಂದು ಉಲ್ಲೇಖಿಸಬೇಕು’ ಎಂದು ಎಸ್ ಬಾಲನ್ ವಾದ ಮಂಡಿಸಿದರು.

‘ಮಾನಹಾನಿ ಮಾಡಲಾಗಿದೆ ಎಂದು ನವೀನ್ ಸೂರಿಂಜೆಯವರ ಎರಡು ವಿಡಿಯೋಗಳು, ಮುನೀರ್ ಕಾಟಿಪಳ್ಳ ಅವರ ಒಂದು ವಿಡಿಯೋ, ಹರೀಶ್ ಕುಮಾರ್ ಅವರ ಮೂರು ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಆ ವಿಡಿಯೋವನ್ನು ಪರಿಶೀಲಿಸಿದಾಗ, ಸದ್ರಿ ವಿಡಿಯೋದಲ್ಲಿ ಯಾವುದೇ ಮಾನಹಾನಿ ಪದಗಳು ಇಲ್ಲ. ನವೀನ್ ಸೂರಿಂಜೆಯವರು ಧರ್ಮಸ್ಥಳದ ಇತಿಹಾಸದ ಬಗ್ಗೆ ಮಾತನಾಡಿದ್ದು, ಮುನೀರ್ ಕಾಟಿಪಳ್ಳ ಅವರು ಮೈಕ್ರೋ ಫೈನಾನ್ಸ್ ಅಪಾಯಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ಅವರು ಸೌಜನ್ಯ ನ್ಯಾಯದ ಬಗ್ಗೆ ಮಾತನಾಡಿರುವ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ನ್ಯಾಯಾಲಯದ ದಾರಿ ತಪ್ಪಿಸಿ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಬೈರಪ್ಪ ಹರೀಶ್ ಕುಮಾರ್ ಅವರು ಸೌಜನ್ಯ ಪರ ಮಾತನಾಡಿರುವ ವಿಡಿಯೋ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿರುವ ಭಾಷಣ ಆಗಿರುತ್ತದೆ. ಆ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯವೇ ತೀರ್ಪು ನೀಡಿದೆ. ಹೈಕೋರ್ಟ್ಆದೇಶ ಪಡೆದುಕೊಂಡು ಮಾತನಾಡುವುದು ಕೂಡಾಇಲ್ಲಿ ನಿಷೇದಿತವೇ ?’ ಎಂದು ಎಸ್ ಬಾಲನ್ ಅವರು ಸಿಟಿ ಸಿವಿಲ್ ನ್ಯಾಯಾಲಯವನ್ನು ಪ್ರಶ್ನಿಸಿದ್ದಾರೆ.

‘338 ಪತ್ರಕರ್ತರು, ಹೋರಾಟಗಾರರು, ಸಂಸ್ಥೆಗಳಿಗೆ ಪಿಟಿಷನ್ ಕಾಪಿ ಜೊತೆಗೆ ಪೆನ್ ಡ್ರೈವ್ ನೀಡಲಾಗಿದೆ. ಪತ್ರಕರ್ತರು, ಹೋರಾಟಗಾರರು ಮಾತನಾಡಿರುವ ವಿಡಿಯೋ ಆ ಪೆನ್ ಡ್ರೈವ್ನಲ್ಲಿದೆ. ಎಲ್ಲಾ ಪೆನ್ ಡ್ರೈವ್ಗಳು ಒರಿಜಿನಲ್ ಆಗಿರಲು ಸಾದ್ಯವೇ ಇಲ್ಲ. ಒಂದು ಡೌನ್ಲೋಡ್ನಿಂದ 338 ಬಾರಿ ಕಾಪಿ ಮಾಡಲೇಬೇಕಿದೆ. ಕಾಪಿ ಪೇಸ್ಟ್ ಮಾಡಿರುವಾಗ ಎಲ್ಲಾ ವಿಡಿಯೋಗಳನ್ನು ಗಾತ್ರಕ್ಕನುಗುಣವಾಗಿ ಎಡಿಟ್ ಮಾಡಿರುವ ಸಾಧ್ಯತೆಗಳಿವೆ. ಎಡಿಟೆಡ್ ವಿಡಿಯೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ದಾರಿ ತಪ್ಪಿಸುವುದು ಅಪರಾಧ. ಅಲ್ಲದೆ, ನ್ಯಾಯಾಲಯಕ್ಕೆ ಯಾವುದೇ ಡಿಜಿಟಲ್ ಸಾಕ್ಷ್ಯವನ್ನು ಸಲ್ಲಿಸುವಾಗ 65ಬಿ ಸರ್ಟಿಫಿಕೇಟ್ ಅನ್ನು ಹಾಕಬೇಕು. ಇಲ್ಲದೇ ಇದ್ದರೆ ಅಂತಹ ವಿಡಿಯೋಗಳನ್ನು ನಾವು ಒರಿಜಿನಲ್ ಎಂದು ಒಪ್ಪಿಕೊಳ್ಳಲು ಸಾದ್ಯವಿಲ್ಲ’ ಎಂದು ಎಸ್ ಬಾಲನ್ ವಾದಿಸಿದರು.

‘ಧರ್ಮಸ್ಥಳದಲ್ಲಿ ನೂರಾರು ಅಸಹಜ ಸಾವುಗಳು ಸಂಭವಿಸಿದೆ. ಈ ಅಸಹಜ ಸಾವುಗಳ ಮಾಧ್ಯಮಗಳ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿಯೇ ಸ್ಪಷ್ಟವಾಗಿ ಉಲ್ಲೇಖಿಸಿದೆ. ಮಾಧ್ಯಮಗಳ ವರದಿ ಆಧರಿಸಿ ರಚನೆ ಮಾಡಿದ ಎಸ್ಐಟಿ ತನಿಖೆಗಳ ಬಗ್ಗೆ ಬರೆಯುವುದನ್ನು, ಮಾತನಾಡುವುದನ್ನು ನಿರ್ಬಂಧಿಸುವುದು ಎಷ್ಟು ಸರಿ ? ಅತ್ಯಾಚಾರ, ಕೊಲೆಗಳ ಬಗ್ಗೆ ಮಾತನಾಡುವುದು ಆರೋಪಿಗಳ ಮಾನಹಾನಿ ಆಗುತ್ತದೆ ಎಂಬ ಆದೇಶವೇ ಅಸಮಂಜಸವಾದುದು. ಎಲ್ಲಾ ಅತ್ಯಾಚಾರ, ಕೊಲೆಗಳಿಗೆ ನ್ಯಾಯ ಸಿಗಬೇಕು ಎನ್ನುವುದು ಆಗ್ರಹವೇ ಹೊರತು ಯಾವುದೇ ಕುಟುಂಬದ ವಿರುದ್ಧದ ಆರೋಪವಲ್ಲ. ಹರ್ಷೇಂದ್ರಕುಮಾರ್ ಮೇಲೆ ಭೂಹಗರಣ ಸೇರಿದಂತೆ ಹಲವು ಆರೋಪಗಳಿದ್ದು, ಸಿಟಿ ಸಿವಿಲ್ ನ್ಯಾಯಾಲಯ ನೀಡಿದ ಆದೇಶವನ್ನು ದುರುಪಯೋಗಪಡಿಸಿಕೊಂಡು ಎಲ್ಲಾ ಚರ್ಚೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಎಸ್ ಬಾಲನ್ ಆರೋಪಿಸಿದರು.

‘ಜಾನ್ ಡೋ ಆದೇಶದ ಪ್ರಕಾರ ಯಾರೂ ಕೂಡಾ ಧರ್ಮಸ್ಥಳ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಜಾನ್ ಡೋ ಆದೇಶವನ್ನೇನ್ಯಾಯಾಲಯ ತಪ್ಪಾಗಿ ಅರ್ಥೈಸಿಕೊಂಡು ಧರ್ಮಸ್ಥಳ ಪ್ರಕರಣದಲ್ಲಿ ಬಳಕೆ ಮಾಡಿಕೊಂಡಿದೆ. ಜಾನ್ ಡೋ ಆದೇಶ ಇರುವುದು ಬೌದ್ಧಿಕ ಆಸ್ತಿ ದುರ್ಬಳಕೆಯನ್ನು ತಪ್ಪಿಸಲು ಮಾತ್ರ. ಮುಖ್ಯವಾಗಿ ಕಾಪಿ ರೈಟ್, ಟ್ರೇಡ್ ಮಾರ್ಕ್ ಮತ್ತು ಪೈರಸಿಯನ್ನು ನಿರ್ಭಂಧಿಸಲು ಜಾನ್ ಡೋ ಆದೇಶ ಬಳಕೆಯಾಗುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿ ಅತ್ಯಾಚಾರ, ಕೊಲೆ, ದೌರ್ಜನ್ಯ, ತಲೆಬುರುಡೆ, ಅಸ್ತಿಪಂಜರ ಎನ್ನುವುದು ಹರ್ಷೆಂದ್ರ ಕುಮಾರ್ ಅವರ ಕಾಪಿ ರೈಟ್ ಆಗಿದೆಯೇ ? ಅತ್ಯಾಚಾರ, ಕೊಲೆ, ಅಸ್ತಿಪಂಜರಗಳೇ ಅವರ ಬೌದ್ದಿಕ ಆಸ್ತಿಯೇ’ ಎಂದು  ಬಾಲನ್ ಪ್ರಶ್ನಿಸಿದರು.

ಅರ್ಜಿದಾರ ಹರ್ಷೇಂದ್ರ ಕುಮಾರ್ ಪರವಾಗಿ ಹಿರಿಯ ವಕೀಲ ರಾಜಶೇಖರ್ ಸುಮಾರು 3 ತಾಸು ವಾದ ಮಂಡಿಸಿದರು. ಯಾವುದೇ ಪ್ರಕರಣದಲ್ಲಿ ವಿರೇಂದ್ರ ಹೆಗ್ಗಡೆಯಾಗಲೀ, ಅವರ ಸಹೋದರರಾಗಲೀ ಆರೋಪಿಯೆಂದು ಸಾಭೀತಾಗಿಲ್ಲ. ಆದರೂ ಪ್ರತಿವಾದಿಗಳು ಅವರ ವಿರುದ್ಧ  ದೋಷಾರೋಪಣೆ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ವಿಡಿಯೋ ಪ್ರದರ್ಶನ ಮಾಡಿದರು. ತಡೆಯಾಜ್ಞೆ ಮತ್ತು ಜಾನ್ ಡೋ ಆದೇಶ ಸರಿಯಾಗಿದೆ ಎಂಬ ಸಂಬಂಧ ಸುಪ್ರಿಂ ಕೋರ್ಟ್ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದರು.

ಹರ್ಷೇಂದ್ರ ಕುಮಾರ್ ಅವರು ಕೋರ್ಟ್ಗೆ ಸಲ್ಲಿಸಿರುವ ಪ್ರತಿವಾದಿ 25 ರ  ವಿಡಿಯೋ ಬೇರೆ ಓಎಸ್ ಕೇಸ್ ಸಂಬಂಧ ಈಗಾಗಲೇ ಡಿಲೀಟ್ ಆಗಿದೆ. ಪ್ರತಿವಾದಿ 33ರವರ ಭಾಷಣವನ್ನು ಯಾವುದೋ ವಾಹಿನಿಗಳು ಪ್ರಸಾರ ಮಾಡಿದ್ದು, ಅದೂ ಡಿಲೀಟ್  ಆಗಿರುವ ಮಾಹಿತಿ ಇದೆ. ಪ್ರತಿವಾದಿ 49 ರ ವಿಡಿಯೋವನ್ನು ಅವರು ತನ್ನ ಸ್ವಂತ ಖಾತೆಯಲ್ಲಿ  ಪ್ರಸಾರ ಮಾಡಿಲ್ಲವಾಗಿದ್ದು, ಬೇರೆ ವಾಹಿನಿಗಳು ಪ್ರಸಾರ ಮಾಡಿರುವ ಲಿಂಕ್ ಅನ್ನು ಶೇರ್ ಮಾಡಿದ್ದರು. ಅದೂ ಕೂಡಾ ಈಗಾಗಲೇ ಡಿಲೀಟ್  ಆಗಿದ್ದು, ಡಿಲೀಟ್ ಆಗಿರುವ ವಿಡಿಯೋವನ್ನು ಬಳಸಿಕೊಂಡು ತಡೆಯಾಜ್ಞೆ ತೆಗೆದುಕೊಂಡಿದ್ದಾರೆ ಎಂದು ಬಾಲನ್ ವಾದಿಸಿದರು.

ಇಷ್ಟಕ್ಕೂ ಮೂವರ ಸಂಬಂಧ ಸಲ್ಲಿಕೆಯಾಗಿರುವ ವಿಡಿಯೋದಲ್ಲಿರುವ ಅಂಶಗಳು ಅಧಿಕೃತವಾಗಿ ಸರಿಯಾಗಿದೆ. ಮೂವರು ಕೂಡಾ ದಾಖಲೆಗಳ ಆಧಾರದಲ್ಲೇ ಭಾಷಣ, ಸಂದರ್ಶನ ನೀಡಿದ್ದಾರೆ. ದಾಖಲೆಗಳ ಆಧಾರದಲ್ಲಿ ವರದಿ ಮಾಡುವುದು, ಸಂದರ್ಶನ ನೀಡುವುದು, ಭಾಷಣ ಮಾಡುವುದು ಮಾನಹಾನಿ ಎಂದು ಪರಿಗಣಿತವಾಗುವುದುಹೇಗೆ ? ಈ ಸಂಬಂಧ ದಾಖಲೆಗಳನ್ನು ನಾಳೆ ನ್ಯಾಯಲಯಕ್ಕೆ ಸಲ್ಲಿಸಲಾಗುವುದು ಎಂದು ಬಾಲನ್ ಇಂದು ವಾದ ಮಂಡಿಸಿದ ಹಿನ್ನಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

More articles

Latest article