ಬೆಂಗಳೂರು: ನಟ ದರ್ಶನ್ ಅಭಿಮಾನಿಗಳ ಮೆಸೇಜ್ ಗಳಿಗೂ ರೇಣುಕಾಸ್ವಾಮಿ ಮೆಸೇಜ್ ಗಳಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಚಿತ್ರನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಮ್ ನಲ್ಲಿ ರಮ್ಯಾ, ದರ್ಶನ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಮ್ ಗೆ ಸ್ವಾಗತ. ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎನ್ನಲು ನಿಮ್ಮ ಕಾಮೆಂಟ್ ಗಳೇ ಸಾಕ್ಷಿ ಎಂದು ಹೇಳಿದ್ದರು.
ಈ ಪೋಸ್ಟ್ ಗೆ ರಮ್ಯಾ ಅವರನ್ನು ದರ್ಶನ್ ಅಭಿಮಾನಿಗಳು ಅಶ್ಲೀಲ ಪದಗಳಿಂದ ಟೀಕಿಸಿದ್ದಾರೆ. ಕೆಟ್ಟಕೆಟ್ಟದ್ದಾಗಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ರಮ್ಯಾ, ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಕ್ಕೂ ದರ್ಶನ್ ಅಭಿಮಾನಿಗಳು ಪ್ರತಿಕ್ರಿಯಿಸುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇಂತಹ ಸ್ತ್ರೀದ್ವೇಷದ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ತಿರುಗೇಟು ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿದ್ದಕ್ಕೆ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ ನಲ್ಲಿ ಪ್ರತಿಕ್ರಿಯೆ ನೀಡಿದ್ದ ರಮ್ಯಾ ಅವರು, ದೇಶದ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಭರವಸೆಯ ಬೆಳಕಾಗಿದೆ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಪೋಸ್ಟ್ ಮಾಡಿದ್ದರು.