ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮಾಡಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧವನ್ನು ವಿಧಿಸಿರುವ ಆದೇಶವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಆದೇಶವನ್ನು ಪ್ರಶ್ನಿಸಿ ಡಿಜಿಟಲ್ ಮಾಧ್ಯಮ ಸಂಸ್ಥೆಯಾದ ಕುಡ್ಲ ರ್ಯಾಂಪೇಜ್ ಪ್ರಧಾನ ಸಂಪಾದಕ ಅಜಯ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎ. ನಾಗಪ್ರಸನ್ನ ಅವರು ನಿರ್ಲಜ್ಞವಾಗಿ ಎಲ್ಲರನ್ನು ನಿರ್ಬಂಧಿಸುವ ಇದೆಂತಹಾ ಆದೇಶ ಎಂದು ಹರ್ಷೇಂದ್ರ ಕುಮಾರ್ ಪರ ವಕೀಲರನ್ನು ಪ್ರಶ್ನಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ. ವೇಲನ್, ಎಫ್ ಐ ಆರ್ ಗಳಲ್ಲಿನ ಅಂಶಗಳನ್ನು ಕುರಿತು ಮಾತನಾಡದಂತೆ 390 ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ. 9,000 ಯು ಆರ್ ಎಲ್ ಗಳನ್ನು ಡಿಲೀಟ್ ಮಾಡಬೇಕು ಎಂದು ಹರ್ಷೇಂದ್ರ ಪರ ವಕೀಲರು ಅರ್ಜಿ ಸಲ್ಲಿಸಿದ ಮೂರು ಗಂಟೆಗಳಲ್ಲೇ ವಿಚಾರಣೆ ನಡೆಸಿದ ವಿಚಾರಣಾಧೀನ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಇದರಿಂದ ಅರ್ಜಿದಾರರ ಮೂಲಭೂತ ಹಕ್ಕಿಗೆ ಧಕ್ಕೆಯುಂಟಾಗಿದೆ ಎಂದರು.
ನಂತರ ನ್ಯಾಯಮೂರ್ತಿ ಎ. ನಾಗಪ್ರಸನ್ನ ಅವರು ಮಾಧ್ಯಮಗಳನ್ನು ನಿರ್ಬಂಧಿಸಿರುವ ಆದೇಶ ಪ್ರಶ್ನಿಸಲಾಗಿದೆ ಎನ್ನುವುದು ತಿಳಿದಿದೆ. ವಿಚಾರಣಾಧೀನ ನ್ಯಾಯಾಲಯ ಪರಿಗಣಿಸದಿದ್ದರೆ ನೀವು ಇಲ್ಲಿ ಬರಬಹುದಿತ್ತು. ಆದರೆ ಇದು ಈ ನ್ಯಾಯಾಲಯದ ( ಹೈಕೋರ್ಟ್) ವ್ಯಾಪ್ತಿಗೆ ಬರುವುದಿಲ್ಲ. ಆದರೂ ನಿಮ್ಮ ವಾದ ಆಲಿಸಲಾಗುವುದು. ಅದಕ್ಕೂ ಮೊದಲು ಈ ಪ್ರಕರಣ ಈ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ವಕೀಲರು, ಹೈಕೋರ್ಟ್ ಗೂ ವ್ಯಾಪ್ತಿ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅದನ್ನು ಸಾಬೀತುಪಡಿಸಲಾಗುವುದು ಎಂದರು. ನಂತರ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದರು.