ಹಾಸನ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಥವಾ ಜಾತಿ ಗಣತಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಪಾಪ ಅವರಿನ್ನೂ ಹೊಸದಾಗಿ ಸಂಸದರಾಗಿದ್ದಾರೆ. ಅವರು ಇನ್ನೂ ಅನುಭವ ಪಡೆದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಯೋಗ್ಯತೆ ಇಲ್ಲ ಎಂಬ ಒಡೆಯರ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಹಿಂದೆಯೂ ಜಾತಿ ಗಣತಿ ಮಾಡಲಾಗಿತ್ತು. ಕೆಲವು ಸಂಘ ಸಂಸ್ಥೆಗಳು, ಸಮಾಜಗಳು ಬೇಡಿಕೆ ಇಟ್ಟಿದ್ದರಿಂದ ಮತ್ತೆ ಅವಕಾಶ ಮಾಡಿಕೊಟ್ಟಿದ್ದೇವೆ. ನಮ್ಮನ್ನು ನೋಡಿ ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಪ್ರತನ್ನ ಣಾಳಿಕೆಯಲ್ಲೂ ಗಣತಿ ನಡೆಸುವುದಾಗಿ ಭರವಸೆ ನೀಡಿತ್ತು. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಇಡೀ ದೇಶದಲ್ಲಿ ಮುಂದಾಳತ್ವ ತೆಗೆದುಕೊಂಡಿದ್ದಾರೆ. ತೆಲಂಗಾಣದಲ್ಲಿ ಈಗಾಗಲೇ ಮಾಡಿದ್ದೇವೆ. ಕರ್ನಾಟಕದಲ್ಲೂ ಮಾಡಲಾಗಿತ್ತು. ಆದರೆ ಹತ್ತು ವರ್ಷ ಆಗಿದ್ದರಿಂದ ಹೊಸದಾಗಿ ಮಾಡಬೇಕು ಎಂದು ಪಕ್ಷದ ಅಧ್ಯಕ್ಷನಾಗಿ ನಾನು, ಅನೇಕ ಸಚಿವರು ಮುಖ್ಯಮಂತ್ರಿಗಳ ಮನವೊಲಿಸಿದ್ದೆವು. ಈಗ ಹೊಸದಾಗಿ ನಡೆಯುತ್ತಿದೆ ಎಂದರು.