ಬೆಂಗಳೂರು: ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡದಿದ್ದರೆ ಆಗಸ್ಟ್ 1 ರಿಂದ ಮುಷ್ಕರ ಆರಂಭಿಸುವುದಾಗಿ 108 ಆರೋಗ್ಯ ಕವಚ ಯೋಜನೆಯ ಆಂಬುಲೆನ್ಸ್ ನೌಕರರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಅವರು, ಆರೋಹ್ಯ ಕವಚ ಯೋಜನೆಯಡಿ 3,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಜನವರಿ 1ರಿಂದ ಸರ್ಕಾ ಆದೇಶಾನುಸಾರ ನೌಕರರು ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ 12 ಗಂಟೆಗಳ ಎರಡು ಪಾಳಿಯಿತ್ತು. ಈಗ 8 ಗಂಟೆಗಳ ಮೂರು ಪಾಳಿ ನಿಗದಿ ಪಡಿಸಿ ವೇತನವನ್ನು ಕಡಿತ ಮಾಡಲಾಗಿದೆ. ಇದರಿಂದ ನೌಕರರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು, ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಬೆಳಿಗ್ಗೆ 6 ಗಂಟೆ ಮತ್ತು ರಾತ್ರಿ 10 ಗಂಟೆಯ ಪಾಳಿಗೆ ಹಾಜರಾಗುವ ನೌಕರರು ಸಾರಿಗ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ಯೋಜನೆಯಡಿ ಶೇ. 33ರಷ್ಟು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಮೂರು ಪಾಳಿಗಳಿಂದ ತೊಂದರೆ ಅನುಭವಿಸುತ್ತಿವಂತಾಗಿದೆ. ಆದ್ದರಿಂದ ವ್ಯವಸ್ಥೆ ಹಾಗೂ ಮೂಲಸೌಕರ್ಯವನ್ನು ಒದಗಿಸುವ ಜತೆಗೆ ವೇತನ ಹೆಚ್ಚಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಈ ಮೊದಲಿನಂತೆ ಎರಡು ಪಾಳಿಯಲ್ಲಿ ಸಮಯ ನಿಗದಿ ಮಾಡಬೇಕು. ಈ ಬಗ್ಗೆ ಜುಲೈ 31ರೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಆ.1ರಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಲಾಗುವುದು ಎಂದರು.