ಧರ್ಮಸ್ಥಳ ನಿಗೂಢ ಹತ್ಯೆಗಳು: ಎಸ್‌ಐಟಿ ರಚನೆಗೆ ನಟ ಪ್ರಕಾಶ್‌ ರಾಜ್‌ ಆಗ್ರಹ; ಚುರುಕುಗೊಂಡ 1 ಲಕ್ಷ ಸಹಿ ಸಂಗ್ರಹ ಅಭಿಯಾನ

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದ ಹತ್ಯೆಗಳನ್ನು ಕುರಿತು ದಿನದಿಂದ ದಿನಕ್ಕೆ  ಕಾವು ಹೆಚ್ಚುತ್ತಲೇ ಇದೆ. ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಈ ನಿಗೂಢ ಹತ್ಯೆಗಳನ್ನು ಕುರಿತು ತನಿಖೆ ನಡೆಸುವಂತೆ ಒತ್ತಡ ಹೆಚ್ಚುತ್ತಲೇ ಇದೆ. ನಟ ಚಿಂತಕ ಪ್ರಕಾಶ್‌ ರಾಜ್‌ ಅವರು ಇಂದು ಮತ್ತೆ ಎಕ್ಸ್‌ ಮೂಲಕ ಮತ್ತೆ  SIT ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಗಳೇ ನಿಮ್ಮ ಮಾತಿನ ಮೇಲೆ ಭರವಸೆಯಿದೆ. ಆದರೆ ಈ ದಾರುಣ ಹಂತಕರನ್ನು ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು  ನಂಬುವ ಹಾಗಿಲ್ಲ. ಆದ್ದರಿಂದ ದಯವಿಟ್ಟು ತನಿಖೆ ವಿಳಂಬವಾಗಿ ಸಾಕ್ಷಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗೆದುಕೊಳ್ಳಿ.  SIT ರಚಿಸಿ ಮತ್ತು ಈ ವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ  ಎಂದು ಒತ್ತಾಯಿಸಿದ್ದಾರೆ.  

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ  ಪ್ರತಿಕ್ರಿಯೆ ನೀಡಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್‌ ಇಲಾಖೆ ತನಿಖೆ ನಡೆಸುತ್ತಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಿ, ಎಸ್‌ಐಟಿ ರಚನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ತನಿಖೆ ವಿಷಯದಲ್ಲಿ ಯಾರ ಒತ್ತಡವೂ ನಡೆಯಲ್ಲ. ಕಾನೂನು ರೀತಿಯಲ್ಲೇ ಕ್ರಮ ಆಗಲಿದೆ ಎಂದು ಹೇಳಿದ್ದರು.

ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿ ಪ್ರಾಥಮಿಕ ಹಂತದಲ್ಲೇ SIT ತನಿಖೆ ಅಂದರೆ ಹೇಗೆ? ಅಗತ್ಯತೆ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಸದ್ಯ ಪೊಲೀಸ್‌ ತನಿಖೆ ನಡೆಯುತ್ತಿದೆ ಎಂದಿದ್ದಾರೆ.‌

ಇದೇ ವೇಳೆ ಸೌಜನ್ಯ ಹತ್ಯೆಯೂ ಸೇರಿದಂತೆ ಧರ್ಮಸ್ಥಳದಲ್ಲಿ ದಶಕಗಳಿಂದ ಆದ ನಿಗೂಢ ಸಾವುಗಳನ್ನು ಕುರಿತು ಸುಪ್ರೀಂಕೋರ್ಟ್‌ ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ ಐ ಟಿ ತನಿಖೆ ಆಗಬೇಕು ಎಂದು ಅಗ್ರಹಿಸಿ 1 ಲಕ್ಷ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುವ change.orgನಲ್ಲಿನ ಅಭಿಯಾನಕ್ಕೆ  ನಟ ಪ್ರಕಾಶ್‌ ರೈ, ಸಾಹಿತಿಗಳಾದ ದೇವನೂರು ಮಹಾದೇವ, ಬಾನು ಮುಷ್ತಾಕ್‌ ಮೊದಲಾದವರು ಸಹಿ ಹಾಕಿದ್ದಾರೆ.

ಮತ್ತೊಂದು ಕಡೆ ಸುಪ್ರೀಂ ಕೋರ್ಟ್‌ ವಕೀಲ ಕೆ.ವಿ. ಧನಂಜಯ್‌ ಅವರು, ಕೇರಳ ಸರ್ಕಾರಕ್ಕೆ ಪತ್ರ ಬರೆದು ಧರ್ಮಸ್ಥಳದಲ್ಲಿ ಮೃತಪಟ್ಟವರು, ಹೂತುಹಾಕಲ್ಪಟ್ಟವರ ಪೈಕಿ ಕೇರಳದವರು ಇರಬಹುದು. ಹಾಗಾಗಿ ಈ ತನಿಖೆಯಲ್ಲಿ ಕೇರಳ ಸರಕಾರವು ಭಾಗಿಯಾಗಬೇಕು ಎಂದು ಕೋರಿದ್ದರು. ಈಗ ನಡೆಯುತ್ತಿರುವ ತನಿಖೆಯಲ್ಲಿ ನೆರವಾಗಲು ಕೇರಳ ಪೊಲೀಸರಿಗೆ ಅವಕಾಶ ನೀಡಬೇಕು. ಕೇರಳ ಸರ್ಕಾರವೂ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬೇಕು ಎಂದು ಒತ್ತಾಯಿಸಿದ್ದರು.

More articles

Latest article