ʼಮನೆ ಮನೆಗೆ ಪೊಲೀಸ್’ʼ ಯೋಜನೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಚಾಲನೆ: ಪೊಲೀಸರ ಬಳಿ ಕಷ್ಟ ಹೇಳಿಕೊಳ್ಳಿ ಎಂದ ಸಚಿವರು

Most read

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ʼಮನೆ ಮನೆಗೆ ಪೊಲೀಸ್’ʼ ಯೋಜನೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಇಂದು  ಚಾಲನೆ ನೀಡಿದರು. ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳನ್ನು ತಡೆಗಟ್ಟುವುದು, ಅಪರಾಧಗಳನ್ನು ಪತ್ತೆ ಹಚ್ಚುವದು ಈ ಯೋಜನೆಯ ಉದ್ದೇಶವಾಗಿದೆ.

ನಂತರ ಮಾತನಾಡಿದ ಸಚಿವರು, ಈ ಯೋಜನೆಯಡಿಯಲ್ಲಿ ಪೊಲೀಸರು ಪ್ರತಿ ಮನೆಗೂ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದ ಕಾನೂನು ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಸಹಾಯಕವಾಗಲಿದೆ ಎಂದರು.

ಪೊಲೀಸರು ಜನಸ್ನೇಹಿ ಆಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಆರಂಭವಾಗಿದೆ. ಪ್ರತಿ ಠಾಣೆಯ ವ್ಯಾಪ್ತಿಯಲ್ಲಿ ಈ ಕೆಲಸ ಆಗಲಿದೆ. ಬೀಟ್ ಪೊಲೀಸರು ಈ ಕೆಲಸವನ್ನು ಮಾಡಬೇಕು. ಯಾರ ಮನೆಯಲ್ಲಿ ಯಾರಿದ್ದಾರೆ, ಹೊಸದಾಗಿ ಬಂದಿದ್ದಾರೆಯೇ, ಬಾಡಿಗೆಗೆ ಇದ್ದಾರೆಯೇ, ಅವರು ಏನು ಕೆಲಸ ಮಾಡುತ್ತಾರೆ ಎಂಬ ಮಾಹಿತಿ ಕಲೆಹಾಕಲಾಗುತ್ತದೆ. ಇದರಿಂದ ಇಡೀ ಬೆಂಗಳೂರು ಡೇಟಾ ಪೊಲೀಸ್‌ ಇಲಾಖೆ ಬಳಿ ಇರುತ್ತದೆ. ಪೊಲೀಸರು ಮನೆಗೆ ಬಂದಾಗ ಜನರು ತಮ್ಮ ಕಷ್ಟಸುಖ ಹೇಳಿಕೊಳ್ಳಬಹುದು. ತೊಂದರೆಗಳಿದ್ದಲ್ಲಿ, ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಮಾಹಿತಿ ನೀಡಬಹುದು. ಶಾಂತಿ ಕಾಪಾಡಲು ಈ ಕಾರ್ಯಕ್ರಮ ಸಹಾಯವಾಗುತ್ತದೆ. ನಿಮ್ಮ ಮನೆಗೆ ಬಂದಾಗ ನಿಮ್ಮ ಹೆಸರನ್ನು ನಮೂದಿಸಿಕೊಂಡು ಬಳಿಕ ಆ ಮಾಹಿತಿಯನ್ನು ಡಿಜಿಟಲೈಸ್ ಮಾಡಿ ಇಟ್ಟುಕೊಳ್ಳಲಾಗುತ್ತದೆ ಎಂದರು.

ಬೆಂಗಳೂರು ಆಗ್ನೇಯ ಡಿಸಿಪಿ ಎಕ್ಸ್​  ಸಂದೇಶದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳನ್ನು ತಡೆಗಟ್ಟುವುದು, ಅಪರಾಧಗಳನ್ನು ಪತ್ತೆ ಹಚ್ಚುವ ಉದ್ದೇಶದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮನೆ ಮನೆಗೆ ಪೊಲೀಸ್’ ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ! ಎಂದು ತಿಳಿಸಿದ್ದಾರೆ.

ನಿಮ್ಮ ಪೊಲೀಸ್ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಷ್ಟಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಗುರುತರವಾದ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿವೆ. ಪೊಲೀಸ್ ಸೇವೆಗಳ ಪ್ರತಿಯೊಂದು ಸ್ತರದಲ್ಲೂ ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವ ಸಾಧಿಸಿಕೊಳ್ಳುವುದರಿಂದ ಮಾತ್ರವೇ ಉತ್ಕೃಷ್ಟ ಸೇವೆಯನ್ನು ಒದಗಿಸಲು ಸಾಧ್ಯ ಆ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಪೊಲೀಸ್ ಠಾಣಾ ಸರಹದ್ದುಗಳನ್ನು ಸಬ್ -ಬೀಟ್​ಗಳಿಗೂ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಗೃಹ ಇಲಾಖೆಯು ‘ಮನೆ ಮನೆಗೆ ಪೊಲೀಸ್’ ಎಂಬ ಕಾರ್ಯಕ್ರಮವನ್ನು ರೂಪಿಸುವುದರ ಮೂಲಕ ಸಕ್ರಿಯ ಸೇವೆಗೆ ನಾಂದಿ ಹಾಡಿದೆ. ಇನ್ನು ಮುಂದೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಿದ್ದಾರೆ. ಬನ್ನಿ ಅಂಜಿಕೆ ಇಲ್ಲದೆ ಮುಕ್ತ ಮನಸ್ಸಿನೊಂದಿಗೆ ನಿಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದೂ ಅವರು ಕರೆ ನೀಡಿದ್ದಾರೆ.

More articles

Latest article