ಬೆಂಗಳೂರು: ವರ್ತಕರು ಯು.ಪಿ.ಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸಿದರೂ ಜಿ.ಎಸ್.ಟಿ. ತೆರಿಗೆ ಅನ್ವಯವಾಗುತ್ತದೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಸ್ಪಷ್ಟಪಡಿಸಿದೆ.
ವರ್ತಕರು ಯು.ಪಿ.ಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಪಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೂ ಜಿ.ಎಸ್.ಟಿ. ತೆರಿಗೆ ಅನ್ವಯವಾಗುತ್ತದೆ. ವರ್ತಕರು ಯಾವುದೇ ರೂಪದಲ್ಲಿ ವಹಿವಾಟು ನಡೆಸಿದಲ್ಲಿ ಅಂತಹ ವರ್ತಕರಿಂದ ಜಿ.ಎಸ್.ಟಿ ಕಾಯ್ದೆಯಡಿ ಇಲಾಖೆಯು ಸೂಕ್ತ ಕ್ರಮಗಳನ್ನು ಅನ್ವಯಿಸುವ ತೆರಿಗೆಯನ್ನು ಸಂಗ್ರಹಿಸಲು ತೆಗೆದುಕೊಳ್ಳುತ್ತದೆ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ದಿನಾಂಕ: 11-07-2025ರಂದು ಡಿಜಿಟಲ್ ಪಾವತಿ ಗೇಟ್ ವೇ ಗಳ ಮೂಲಕ ವಹಿವಾಟು ನಡೆಸಿದ ವರ್ತಕರ ಬಗ್ಗೆ ಇಲಾಖಾ ವತಿಯಿಂದ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿತ್ತು. ತದನಂತರ ಹಲವು ವಿದ್ಯುನ್ಮಾನ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಪ್ರಕಟವಾಗಿದ್ದು ಇದರಿಂದ ವರ್ತಕ ಸಮುದಾಯದಲ್ಲಿ ಗೊಂದಲಗಳು ಉಂಟಾಗಿರುವುದು ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಕೆಳಕಂಡಂತೆ ಪೂರಕ ಮಾಹಿತಿಯನ್ನು ನೀಡಿದೆ.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ಪ್ರಕರಣ 22 ರನ್ವಯ ಕೇವಲ ಸರಕುಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ನಗದು ರೂಪದಲ್ಲಾಗಲೀ, ಯು.ಪಿ.ಐ. ಪಿ.ಓ.ಎಸ್ ಮೆಷಿನ್, ಬ್ಯಾಂಕ್ ಖಾತೆ ಹಾಗೂ ಇತರೆ ಯಾವುದೇ ವಿಧಾನಗಳಿಂದ ರೂ.40 ಲಕ್ಷಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ರೂ.20 ಲಕ್ಷಗಳನ್ನು ಮೀರಿದರೆ ಅಂತಹ ವರ್ತಕರು ಜಿ.ಎಸ್.ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ (Taxable) ಮತ್ತು ತೆರಿಗೆ ವಿನಾಯಿತಿ ಪಡೆದ (Exempted) ಸರಕು ಮತ್ತು ಸೇವೆಗಳು ಸೇರಿರುತ್ತವೆ. ವರ್ತಕರು ಜಿ.ಎಸ್.ಟಿ. ಅಡಿಯಲ್ಲಿ ಸಾಮಾನ್ಯ (Regular) ನೋಂದಣಿ ಪಡೆದಿದ್ದೇ ಆದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ (Taxable) ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ನೋಂದಾಯಿತ ವರ್ತಕರು ತಾನು ಖರೀದಿಸಿದ ವಸ್ತುಗಳ ಮೇಲೆ ಹೂಡುವಳಿ (Input Tax) ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಂಡು ನಿಮ್ಮಳ ತೆರಿಗೆಯನ್ನು ಪಾವತಿಸಬೇಕಾಗಿರುತ್ತದೆ, ಆದುದರಿಂದ ಮೌಲ್ಯವರ್ಧನೆಯ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತವು ಅಲ್ಪ ಪ್ರಮಾಣದಲ್ಲಿರುತ್ತದೆ.
ಮುಂದುವರೆದು, ಯಾವುದೇ ವ್ಯಾಪಾರಿಗಳು ತಮ್ಮ ವಾರ್ಷಿಕ ವಹಿವಾಟು ರೂ. 1.50 ಕೋಟಿಗಿಂತ ಕಡಿಮೆ ಇದ್ದಲ್ಲಿ ಜಿ.ಎಸ್.ಟಿ ಅಡಿ ನೋಂದಣಿಯನ್ನು ಪಡೆದು ರಾಜಿ ತೆರಿಗೆ ಪದ್ಧತಿ (Composition Tax Scheme) . 0.5 5GST ಮತ್ತು ಶೇ 0.5 CGST ತೆರಿಗೆಯನ್ನು ಪಾವತಿಸಬಹುದು. ಆದರೆ ನೋಂದಣಿ ಪಡೆಯದೇ ನೆಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿಯು ಅನ್ವಯಿಸುವುದಿಲ್ಲ.
ಆದ ಕಾರಣ, ವರ್ತಕರು ಯಾವುದೇ ಗೊಂದಲಕ್ಕೆ ಒಳಗಾಗದೇ, ನೋಟೀಸ್ ಬಂದಿರುವ ಕಛೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆಯನ್ನು ನೀಡಿದರೆ ಅಧಿಕಾರಿಗಳು ಪರಿಶೀಲಿಸಿ, ಅವರಿಗೆ ಜಿ.ಎಸ್.ಟಿ ಸಂಬಂಧಿಸಿದ ನಿಯಮಗಳು ಮತ್ತು ಅದಕ್ಕೆ ಪರಿಹಾರಗಳು ತಿಳಿಸಿ, ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತು ಪಡಿಸಿ, ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳ ಅನ್ವಯ ತೆರಿಗೆಯನ್ನು ವಿಧಿಸುತ್ತಾರೆ.
ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ವರ್ತಕರಲ್ಲಿ ಸೂಕ್ತ ಮಾರ್ಗದರ್ಶನ, ಸಹಕಾರ ಹಾಗೂ ಅರಿವು ಮೂಡಿಸಲು ಸೂಚಿಸಲಾಗಿದೆ. ಹಾಗೂ ಹೊಸದಾಗಿ ನೀಡಲಾಗುವ ನೋಂದಣಿಯನ್ನು ತೆರಿಗೆದಾರರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಸುಸೂತ್ರವಾಗಿ ನೀಡಲು ಸಹ ಸೂಚಿಸಲಾಗಿದೆ.
ಈಗಾಗಲೇ ರಾಜ್ಯದಲ್ಲಿ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿರುತ್ತಾರೆ. ಈಗಾಗಲೇ ವಾರ್ಷಿಕ ವಹಿವಾಟು ರೂ. 40 ಲಕ್ಷಗಳು (ಸರಕುಗಳ ಪೂರೈಕೆದಾರರು), ರೂ. 20 ಲಕ್ಷಗಳು (ಸೇವೆಗಳ ಪೂರೈಕೆದಾರರು) ಮೀರಿರುವ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ನೋಂದಾಯಿತ ವರ್ತಕರು ಇನ್ನು ಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ. 1 ರಂತೆ ತೆರಿಗೆ ಪಾವತಿಸುವುದು ಕಷ್ಟಕರವಾಗಲಾರದು. ಈಗಾಗಲೇ ಶೇ. 90 ರಷ್ಟು ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವುದರಿಂದ ಉಳಿಕೆ ಶೇ. 10 ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ತರವಲ್ಲ. ಜಿಎಸ್‌ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.