ಚಂಡೀಗಢ: ಮಕ್ಕಳ ಕಳ್ಳಸಾಗಣೆ ಮತ್ತು ಶೋಷಣೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ವಯಸ್ಕರೊಂದಿಗೆ ಭಿಕ್ಷಾಟನೆ ಮಾಡುತ್ತಿರುವ ಮಕ್ಕಳ ಡಿ ಎನ್ ಎ ಪರೀಕ್ಷೆ ನಡೆಸುವಂತೆ ಪಂಜಾಬ್ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಜೀವನ್ ಜ್ಯೋತಿ–2 ಯೋಜನೆ ಅಡಿಯಲ್ಲಿ ಸಾಮಾಜಿಕ ಭದ್ರತಾ ನಿರ್ದೇಶನಾಲಯ (ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ) ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಸೂಚನೆ ನೀಡಿದೆ. ಡಿಎನ್ ಎ ಪರೀಕ್ಷೆಯು ಮಕ್ಕಳು ಮತ್ತು ಅವರೊಂದಿಗೆ ಭಿಕ್ಷೆ ಬೇಡುತ್ತಿರುವ ವ್ಯಕ್ತಿಗಳ ನಡುವಿನ ಸಂಬಂಧವನ್ನು ಪತ್ತೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ವೇಳೆ ಡಿ ಎನ್ ಎ ಪರೀಕ್ಷೆಯಲ್ಲಿ ಭಿಕ್ಷಾಟನೆ ಮಾಡುತ್ತಿರುವ ಮಗು ಮತ್ತು ಮಗುವಿನ ಜೊತೆಯಿರುವ ವ್ಯಕ್ತಿಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಕಂಡುಬಂದರೆ ಅಂತಹವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಮಕ್ಕಳ ಭಿಕ್ಷಾಟನೆ ತೊಡೆದುಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.