ವಿಮಾನದ ಕಾಕ್‌ ಪಿಟ್‌ ಗೆ ನುಗ್ಗಲು ಯತ್ನ; ಆತಂಕಕ್ಕೀಡಾದ ಪ್ರಯಾಣಿಕರು!

Most read

ನವದೆಹಲಿ: ಸ್ಪೈಸ್ ಜೆಟ್ ವಿಮಾನದ ಕಾಕ್‌ ಪಿಟ್‌ ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ ಇಬ್ಬರು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪ್ರಕರಣ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ತಡವಾಗಿ ತಿಳಿದು ಬಂದಿದೆ.

ವಿಮಾನವು ಟೇಕಾಫ್‌ ಆಗಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಇದರಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.

ಎಸ್‌ ಜಿ- 9282 ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ದುರ್ವರ್ತನೆ ತೋರಿದ್ದಾರೆ. ಬಲವಂತವಾಗಿ ಕಾಕ್‌ ಪಿಟ್‌ ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಕ್ಯಾಪ್ಟನ್‌, ಕ್ಯಾಬಿನ್ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಪದೇ ಪದೇ ಎಚ್ಚರಿಕೆ ನೀಡಿದ್ದರೂ ತಮ್ಮ ಆಸನಗಳಿಗೆ ಹಿಂತಿರುಗಲು ನಿರಾಕರಿಸಿದ್ದಾರೆ. ಇದರಿಂದ ವಿಮಾನದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು ಎಂದು ಸ್ಪೈಸ್‌ ಜೆಟ್ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪೈಲಟ್‌ ವಿಮಾನವನ್ನು ರನ್‌ ವೇಯಿಂದ ಪಾರ್ಕಿಂಗ್‌ ಸ್ಥಳಕ್ಕೆ ತಂದರು. ನಂತರ ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿ ಮುಂದಿನ ಕ್ರಮಕ್ಕಾಗಿ ಅವರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ(ಸಿಐಎಸ್ ಎಫ್) ಹಸ್ತಾಂತರಿಸಲಾಯಿತು. ಸ್ಪೈಸ್ ಜೆಟ್‌ ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ಮಧ್ಯಾಹ್ನ 12:30ಕ್ಕೆ ಹೊರಡಬೇಕಿತ್ತು. ಇದರಿಂದ ಪ್ರಯಾಣ ತಡವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

More articles

Latest article