ಧರ್ಮಸ್ಥಳ ಹತ್ಯೆಗಳು: ಎಸ್.ಐ.ಟಿ ರಚನೆಗೆ ಸರಕಾರಕ್ಕೆ ಪತ್ರ ಬರೆದ ರಾಜ್ಯ ಮಹಿಳಾ ಆಯೋಗ

Most read

ಬೆಂಗಳೂರು: ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕ ಸಾವು ಹಾಗೂ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್.ಐ.ಟಿ) ರಚಿಸುವಂತೆ ಕರ್ನಾಟಕ ರಾಜ್ಯ ಮಹಿಳಾಆಯೋಗ ಸರಕಾರಕ್ಕೆ ಪತ್ರ ಬರೆದಿದೆ.  

ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು,  ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಕನ್ನಡ ಮತ್ತು ಆಂಗ್ಲಭಾಷೆಯ  ಮಾಧ್ಯಮಗಳು ಮನುಷ್ಯರೊಬ್ಬರ ತಲೆಬುರುಡೆ ದೊರಕಿರುವುದಾಗಿ ವರದಿ ಮಾಡಿದೆ. ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆಯನ್ನು  ಆಯೋಗ ಗಂಭೀರವಾಗಿ ಪರಿಗಣಿಸಿದೆ. ಶವ ಪ್ರಸಾರವಾಗಿರುವುದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ.

 ಮಾಧ್ಯಮ ವರದಿ ಮತ್ತು ಶವಗಳನ್ನು ಹೂತಿರುವ ವ್ಯಕ್ತಿಯ ಹೇಳಿಕೆಯು ಕಳೆದ 20ಕ್ಕೂ ಹೆಚ್ಚು ವರ್ಷ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕವಾದ ಸಾವು ಮತ್ತು ನಾಪತ್ತೆ ಪ್ರಕರಣಗಳು ಹಲವು ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಬಗ್ಗೆ ಹೇಳಲಾಗಿದೆ. ಅನೇಕ ಕುಟುಂಬಗಳು ತಮ್ಮ ಮಕ್ಕಳ ನಾಪತ್ತೆ, ಸಾವಿನ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಸಿಬ್ಬಂದಿಗಳು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಕೂಡ ಆರೋಪ ಮಾಡಿರುತ್ತಾರೆ. ಹಾಗಾಗಿ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್.ಐ.ಟಿ) ರಚಿಸುವಂತೆ ಕೋರುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ಪತ್ರದಲ್ಲಿ ತಿಳಿಸಿದ್ದಾರೆ.

More articles

Latest article