ದೇವನಹಳ್ಳಿ: ಭೂಸ್ವಾಧೀನ ವಿರೋಧಿಸಿ 1200ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸಿರುವ ಚನ್ನರಾಯಪಟ್ಟಣದ ಜುಲೈ 15ರಂದು ನಡೆಯಲಿರುವ ರೈತರ ಪರವಾಗಿ ದೃಢ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಸರ್ಕಾರ ಪತನ ಆಗಲೂಬಹುದು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಸರ್ಕಾರ ರೈತರ ವಿರುದ್ಧ ನಿರ್ಧಾರ ಕೈಗೊಂಡರೆ ಹೋರಾಟವನ್ನು ರಾಷ್ಟ್ರಮಟ್ಟದಲ್ಲಿ ನಡೆಸಬೇಕಾಗುತ್ತದೆ ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ರೈತ ಮುಖಂಡರು ರೈತರ ಹೋರಾಟಕ್ಕೆ ಸ್ಪಂದಿಸಿ ಸರ್ಕಾರ ರೈತರ ಪರವಾದ ನಿಲುವು ತಾಳಬೇಕು. ರೈತರ ಕೃಷಿ ಭೂಮಿಯನ್ನು ಉಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಸರ್ಕಾರ ಪತನವಾದರೂ ಆಗಬಹುದು ಎಂದು ಹೇಳಿದರು.
ಇತ್ತೀಚೆಗೆ ಕೆಲವರು ಭೂಮಿ ಕೊಡುವುದಾಗಿ ಹೇಳಿದ್ದಾರೆ. ರೈತ ಹೋರಾಟ ನಿರ್ಣಾಯಕ ಹಂತ ತಲುಪಿರುವಾಗ ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ. ಸರ್ಕಾರದ ಪ್ರಚೋದನೆಯಿಂದಲೇ ಕೆಲವರು ಈ ರೀತಿ ಮಾತನಾಡುತ್ತಿದ್ದಾರೆ. ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಒಗ್ಗೂಡಿ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ರೈತರ ಒಗ್ಗಟ್ಟು ಮುರಿದು ಭೂಸ್ವಾಧೀನ ಪರವಾದ ತಂಡವೊಂದನ್ನು ರಾತ್ರೋರಾತ್ರಿ ಹುಟ್ಟು ಹಾಕಿದೆ. ಇದು ಸರ್ಕಾರಿ ಪ್ರಾಯೋಜಿತ ದಲ್ಲಾಳಿಗಳ ತಂಡ ಎಂದು ಹೋರಾಟಗಾರರು ಟೀಕಿಸಿದರು.