ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಕೃಷಿ ಭೂಮಿ ಸ್ವಾಧೀನದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣಪ್ಪ ಅವರ ತಂಡ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಜಮೀನು ನೀಡಲು ಸಿದ್ಧ ಎಂದು ಹೇಳಿಕೆ ನೀಡಿರುವುದನ್ನು ರೈತರು ವಿರೋಧಿಸಿದ್ದಾರೆ.
ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ತೆಲ್ಲೋಹಳ್ಳಿ, ಹರಳೂರುನಲ್ಲಿ ಭೂ ಸ್ವಾಧೀನ ವಿರೋಧಿ ಗ್ರಾಮ ಆಂದೋಲನ ನಡೆಯಿತು. ಈ ಸಭೆಯಲ್ಲಿ ಈ ರಾಜಕೀಯ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಎಸ್.ಸಿ ಘಟಕದ ಅಧ್ಯಕ್ಷ ಎಂ.ಎಂ.ಶ್ರೀನಿವಾಸ್ ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ಪಕ್ಷಾತೀತವಾಗಿ ಪ್ರತಿಯೊಬ್ಬರು ಬೆಂಬಲ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿಗೆ ಮತ್ತು ಹಣ ಸಂಪಾದನೆ ಮಾಡುವ ರಿಯಲ್ ಎಸ್ಟೇಟ್ ಉದ್ಯಮಿಗಳ ಹೇಳಿಕೆಯನ್ನು ಖಂಡಿಸಿದರು.
ದೇವನಹಳ್ಳಿ ಮೀಸಲಾತಿ ಕ್ಷೇತ್ರದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಆಪ್ತ ಬಳಗದಲ್ಲಿ ಒಬ್ಬರಾಗಿರುವ ಜಿಪಂ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣಪ್ಪ, 4ವರ್ಷಗಳಿಂದ ಬಾಯಿ ಬಿಟ್ಟಿರಲಿಲ್ಲ. ಇದೀಗ ಏಕಾಏಕಿ ಪ್ರತ್ಯಕ್ಷವಾಗಿ ಭೂ ಸ್ವಾಧೀನ ಕುರಿತು ಮಾತನಾಡಲು ಆರಂಭಿಸಿದ್ದಾರೆ ಎಂದು ಟೀಕಿಸಿದರು.
ಭೂಗಳ್ಳರು, ರಿಯಲ್ ಎಸ್ಟೇಟ್ ಉದ್ಯಮಿಗಳ ಗುಂಪು ಕಟ್ಟಿಕೊಂಡು ಹೋಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುತ್ತಾರೆ. ಇವರು ಕಳೆದ 1,200 ದಿನಗಳಿಂದ ಏಕೆ ಮೌನವಾಗಿದ್ದರು?. ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ವ್ಯಕ್ತಿಗಳಂತೆ ಮಾತನಾಡುವವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ರಾಜಕೀಯ ಮುಖಂಡರಿಂದ ಈಗಾಗಲೇ ಸಾಕಷ್ಟು ದಲಿತರು ಭೂಮಿ ಕಳೆದುಕೊಂಡಿದ್ದಾರೆ. ಸರ್ಕಾರ ಹೇಳಿಕೊಟ್ಟಂತೆ ಹೇಳಿಕೆ ನೀಡುತ್ತಿದ್ದಾರೆ. ರೈತರ ನೋವು, ಅನ್ನದಾತನ ಸಂಕಷ್ಟ ಇವರ ಅರಿವಿಗೆ ಬರುವುದಿಲ್ಲ. ಇಂತಹ ಅಯೋಗ್ಯರನ್ನು ಚುನಾವಣೆಯಲ್ಲಿ ಸೋಲಿಸಿ ದೂರವಿಡಬೇಕು ಎಂದೂ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.