ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹತ್ಯೆಗಳನ್ನು ಕುರಿತು ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ವ್ಯಕ್ತಿ ಶುಕ್ರವಾರ ವಕೀಲರ ಮೂಲಕ ಶುಕ್ರವಾರ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹಾಜರಾಗಿದ್ದಾರೆ. ಅವರು ಈಗಾಗಲೇ ಪೊಲೀಸರಿಗೂ ದೂರು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ರಕ್ಷಣೆಯ ಉದ್ದೇಶದಿಂದ ಅವರ ಗುರುತು ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ. ತಾನೇ ಸ್ವತಃ ಹೊರ ತೆಗೆದಿರುವ ಅಸ್ಥಿ ಪಂಜರದ ಅವಶೇಷವನ್ನು ದೂರುದಾರ ಹಾಜರುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಆ ಅಸ್ಥಿಪಂಜರವನ್ನು ದೂರುದಾರರ ಪರ ವಕೀಲರು, ಪಂಚರ ಸಮ್ಮುಖದಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಸ್ ಪಿ ಹೇಳಿದ್ದಾರೆ.
ನಿನ್ನೆ ಈ ಅನಾಮಧೇಯ ದೂರುದಾರ ಧರ್ಮಸ್ಥಳ ಗ್ರಾಮದಲ್ಲಿ ಹತ್ಯೆಗಳು ನಡೆದಿವೆ ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಅವರು ತನ್ನ ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ತಮ್ಮ ವಕೀಲರಾದ ಓಜಸ್ವಿ ಗೌಡ, ಸಚಿನ್ ದೇಶಪಾಂಡೆ ಅವರ ಜತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನ್ನ ಗುರುತು ಪತ್ತೆಯಾಗದಂತೆ ತಲೆಯಿಂದ ಕಾಲಿನವರೆಗೆ ಕಪ್ಪು ಬಣ್ಣದ ಮುಸುಕು ಧರಿಸಿದ್ದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ನಂತರ ಈ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹೇಳಿಕೆ ಪಡೆಯಲಾಯಿತು ಎಂದು ತಿಳಿದು ಬಂದಿದೆ.
ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಜಂಟಿ ಹೇಳಿಕೆ ನೀಡಿದ್ದು, ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದಿದ್ದ ದೂರುದಾರರ ದೂರನ್ನು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 183ರ ಅಡಿಯಲ್ಲಿ ನ್ಯಾಯಾಲಯ ದಾಖಲಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ದೂರುದಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡುವಾಗ ತಾನು ಅನಕ್ಷರಸ್ಥರಾಗಿದ್ದು, ಇದುವರೆಗೆ ಯಾವುದೇ ನ್ಯಾಯಾಲಯಕ್ಕೆ ಹೋಗಿಲ್ಲ. ಒಬ್ಬ ವಕೀಲರು ತನ್ನ ಜತೆಗಿರುವಂತೆ ಕೋರಿದ್ದರು. ಈ ಅಂಶವನ್ನು ನಾವು ನ್ಯಾಯಾಲದ ಗಮನಕ್ಕೆ ತಂದಾಗ ನ್ಯಾಯಾಲಯವು ಹೇಳಿಕೆ ಪಡೆಯುವ ವೇಳೆ ವಕೀಲರು ಹಾಜರಿರುವುದನ್ನು ಒಪ್ಪಲಿಲ್ಲ ಎಂದು ಕೀಲರು ತಿಳಿಸಿದ್ದಾರೆ. ದೂರುದಾರರಿಗೆ ಸಾಕ್ಷಿ ರಕ್ಷಣಾ ಯೋಜನೆ 2018ರ ಅಡಿಯಲ್ಲಿ ಸೂಕ್ತ ರಕ್ಷಣೆ ಒದಗಿಸಲಾಗಿದೆ. ಈ ಕಾರಣಕ್ಕೆ ನ್ಯಾಯಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ದೂರುದಾರರು ಕೃತಜ್ಞತೆ ಸಲ್ಲಿಸುವುದಾಗಿ ವಕೀಲರು ಹೇಳಿದ್ದಾರೆ.
ದೂರುದಾರರು ದೂರಿನಲ್ಲಿ ತಮ್ಮ ಹೆಸರು ಮತ್ತು ಮಾಹಿತಿಯನ್ನು ರಹಸ್ಯವಾಗಿಡುವಂತೆ ಕೋರಿದ್ದು, ಅವರ ವಿವರವನ್ನು ಬಹಿರಂಗ ಗೊಳಿಸಿಲ್ಲ. ಪೊಲೀಸರೂ ಯಾವುದೇ ಮಾಹಿತಿ ನೀಡಿಲ್ಲ. ದೂರಿನ ಬಗ್ಗೆ ಕೋರ್ಟ್ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು.
ಜೀವಬೆದರಿಕೆ ಒಡ್ಡಿ ಮೃತದೇಹಗಳನ್ನು ರಹಸ್ಯವಾಗಿ ಹೂತುಹಾಕಿಸಿದ್ದಾರೆ. ಹಲವಾರು ಮೃತದೇಹಗಳ ವಿಲೇವಾರಿ ಮಾಡಿದ್ದು, ಈ ಬಗ್ಗೆ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ನನಗೆ ಹಾಗೂ ನನ್ನ ಕುಟುಂಬದವರಿಗೆ ರಕ್ಷಣೆ ನೀಡಿದರೆ ಕೃತ್ಯ ನಡೆಸಿದವರ ಮಾಹಿತಿ ಹಾಗೂ ನಾನು ಮೃತದೇಹ ವಿಲೇವಾರಿ ಮಾಡಿದ ಸ್ಥಳಗಳನ್ನು ತೋರಿಸಲು ಸಿದ್ಧ ಎಂದು ಅನಾಮಧೇಯ ಜುಲೈ 3ರಂದು ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.