ಬೆಂಗಳೂರು: ಜುಲೈ 17 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಕುನ್ಹಾ ಅವರ ವರದಿಯನ್ನು ಮಂಡಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಆರ್.ಸಿ.ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕು ಹನ್ನೊಂದು ಜನ ಮೃತ ಪಟ್ಟಿದ್ದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿದ್ದ ಏಕ ವ್ಯಕ್ತಿ ಆಯೋಗವು ಎರಡು ಸಂಪುಟಗಳಲ್ಲಿ ವರದಿಯಲ್ಲಿ ಸಲ್ಲಿಸಿದೆ ಎಂದೂ ತಿಳಿಸಿದರು.
ವರದಿಯಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟ ನಿರ್ಧಾರ ಮಾಡಲಿದೆ. ನಾನು ವರದಿಯನ್ನು ಪೂರ್ಣವಾಗಿ ಓದಿಲ್ಲ. ಎಂದು ಹೇಳಿದರು.
ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರ ಅಮಾನತ್ತನ್ನು ಸಿಎಟಿಯವರು ವಿರೋಧಿಸಿ ಆದೇಶಿಸಿರುವ ಬಗ್ಗೆ ಆಯೋಗದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿ, ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.