ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದಾಗಿ ಹೇಳಿಕೆ ನೀಡಿದ್ದ ವ್ಯಕ್ತಿ ಇಂದು ಸಂಜೆ 4.40 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಇಬ್ಬರು ವಕೀಲರ ಜತೆ ಹಾಜರಾಗಿದ್ದಾರೆ.
ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಹಾಜರಾಗಿ ಬಿಎನ್ ಎಸ್-183 ಅಡಿಯಲ್ಲಿ ಹೇಳಿಕೆ ನೀಡಿದ್ದಾರೆ. ಈ ವ್ಯಕ್ತಿ ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ವಿಸ್ತೃತ ತನಿಖೆ ನಡೆಸಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವೆ ಅನ್ನಪೂರ್ಣದೇವಿ ಆಗ್ರಹ:
ಧರ್ಮಸ್ಥಳ ಗ್ರಾಮದ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ಮಾಡಬೇಕು ಮತ್ತು ದೂರು ನೀಡಿದ ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಬೇಕು ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಅನ್ನಪೂರ್ಣಾ ದೇವಿ ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ ಎಂದು ಇಂಗ್ಲೀಷ್ ಭಾಷೆಯ ಚಾನೆಲ್ ವರದಿ ಮಡಿದೆ.
ಈ ಸುದ್ದಿವಾಹಿನಿ ನಿನ್ನೆ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಕೃತ್ಯಗಳನ್ನು ಕುರಿತು ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಈ ಸುದ್ದಿ ವಾಹಿನಿ ಜತೆ ಮಾತನಾಡಿದ ಅವರು ಧರ್ಮಸ್ಥಳದಲ್ಲಿ1995ರಿಂದ 2014 ರವರೆಗೆ ಇಂತಹ ಘಟನೆಗಳು ದೀರ್ಘಕಾಲದವರೆಗೆ ನಡೆದಿರುವುದು ಅಚ್ಚರಿ ಮೂಡಿಸಿದೆ. ಈ ಕೃತ್ಯಗಳನ್ನು ಕುರಿತು ಇದುವರೆಗೂ ಯಾರಿಗೂ ತಿಳಿಯದಿರುವುದು ನಿಜಕ್ಕೂ ಗಂಭೀರವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಇದೀಗ ಅನಾಮಧೇಯ ವ್ಯಕ್ತಿಯೊಬ್ಬ ಈ ಕುರಿತು ಮಾಹಿತಿ ಬಹಿರಂಗಗೊಳಿಸಿದ್ದಾರೆ. ಕರ್ನಾಟಕ ಸರಕಾರ ಈ ಹತ್ಯೆಗಳನ್ನು ಕುರಿತು ಸಮಗ್ರ ಮತ್ತು ವಿಸ್ತೃತವಾದ ತನಿಖೆ ನಡೆಸಬೇಕು. ಮಾಹಿತಿ ನೀಡಿದ ಈ ವ್ಯಕ್ತಿಗೆ ರಕ್ಷಣೆ ನೀಡಬೇಕು ಎಂದು ಅವರು ಕರ್ನಾಟಕ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದ ಕೊಲೆಗಳು ಮತ್ತು ಅತ್ಯಾಚಾರಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಗೆ ಬಂದು ಮಾಹಿತಿ ನೀಡುತ್ತೇನೆಂದು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದರು. ನಂತರ ಇವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.
ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಈ ವ್ಯಕ್ತಿ ಮನವಿ ಮಾಡಿಕೊಂಡಿದ್ದರು.
ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ವ್ಯಕ್ತಿಯೊಬ್ಬರು ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಉದ್ದೇಶಿಸಿದ್ದಾರೆ ಎಂದು ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರು ಬರೆದಿದ್ದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಆ ಪತ್ರದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಧರ್ಮಸ್ಥಳ ಪೊಲೀಸರು, ಆ ಪತ್ರದಲ್ಲಿ ಉಲ್ಲೇಖಿಸಿರುವ ಬೆಂಗಳೂರು ಮೂಲದ ವಕೀಲರನ್ನು ಸಂಪರ್ಕಿಸಿದ್ದರು. ಸೂಕ್ತ ರಕ್ಷಣೆಗೆ ವ್ಯವಸ್ಥೆ ಮಾಡಿದರೆ ಮಾಹಿತಿ ನೀಡಿದ ವ್ಯಕ್ತಿ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಗೆ ಅಥವಾ ಧರ್ಮಸ್ಥಳ ಠಾಣೆಗೆ ಖುದ್ದಾಗಿ ಹಾಜರಾಗಲಿದ್ದಾರೆ ಎಂದು ವಕೀಲರು ತಿಳಿಸಿದ್ದರು.
ನಂತರ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರನ್ನು ಒಳಗೊಂಡ ವಕೀಲರ ತಂಡವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯವರ ಕಚೇರಿಗೆ ಭೇಟಿ ನೀಡಿತ್ತು. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ್ ಅವರು ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ವಕೀಲರ ತಂಡವು ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.
ಆ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಾಹಿತಿ ನೀಡಿದ್ದರು.