ನವದೆಹಲಿ: ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ( 25 ) ಅವರನ್ನು ಆಕೆಯ ತಂದೆಯೇ ಹತ್ಯೆ ಮಾಡಿದ್ದಾನೆ. ದೆಹಲಿ ಬಳಿಯ ಗುರುಗ್ರಾಮದ ಸೆಕ್ಟರ್ 57ರ ಸುಶಾಂತ್ ಲೋಕ್ ಪ್ರದೇಶದಲ್ಲಿ ದೀಪಕ್ ಯಾದವ್ (49) ತಮ್ಮ ಪುತ್ರಿ ರಾಧಿಕಾ ಅವರನ್ನು ಗುಂಡಿಟ್ಟು ಕೊಂದಿದ್ದಾರೆ. ಪೊಲೀಸರು ದೀಪಕ್ ಯಾದವ್ ನನ್ನು ಬಂಧಿಸಿದ್ದಾರೆ.
ತಂದೆಯೇ ಮಗಳನ್ನು ಹತ್ಯೆ ಮಾಡಲುನಿಖರ ಕಾರಣ ಏನೆಂದು ಇದುವರೆಗೂ ತಿಳಿದು ಬಂದಿಲ್ಲ. ಪ್ರಾಥಮಿಕ ತನಿಖೆಗಳ ಪ್ರಕಾರ ಕೊಲೆಗೆ ‘ಮಗಳ ಸಂಪಾದನೆಯಿಂದ ತಂದೆ ಬದುಕುತ್ತಿದ್ದಾನೆ’ಎಂದು ನೆರೆಹೊರೆಯವರು ಕುಹಕವಾಡುತ್ತಿದ್ದದ್ದು ಕಾರಣ ಎನ್ನಲಾಗುತ್ತಿದೆ.
ನಿನ್ನೆ ಸಂಜೆ 5 ಗಂಟೆ ವೇಳೆಗೆ ರಾಧಿಕಾ ಮಹಡಿಯ ಕೋಣೆಯಲ್ಲಿದ್ದಾಗ ಹಿಂದಿನಿಂದ ಸದ್ದಿಲ್ಲದೆ ಬಂದ ದೀಪಕ್ ಯಾದವ್, ಆಕೆಯ ಬೆನ್ನಿಗೆ ರಿವಾಲ್ವರ್‌ನಿಂದ 5 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾರೆ.
ಮಗಳನ್ನು ಕೊಂದಿದ್ದೇಕೆ ಎಂದು ದೀಪಕ್ ಸರಿಯಾಗಿ ಹೇಳುತ್ತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ರಾಧಿಕಾ ಕಳೆದ ವರ್ಷ ಯುವಕನೊಂದಿಗೆ ಮ್ಯೂಸಿಕ್ ವಿಡಿಯೊ ಒಂದರಲ್ಲಿ ಕಾಣಿಸಿಕೊಂಡಿದ್ದರು. ಟೆನಿಸ್ ಬಿಟ್ಟು ಮಗಳು ನಟನೆಗೆ ಹೋಗುತ್ತಾಳೆ ಎಂದು ತಿಳಿದು ಬಂದಿದ್ದಕ್ಕೆ ಕೋಪಗೊಂಡಿದ್ದ ಎನ್ನಲಾಗುತ್ತಿದೆ. ರಾಧಿಕಾ ಟೆನಿಸ್ ಆಟದಿಂದ ಗುರುತಿಸಿಕೊಂಡಿದ್ದು, ಗುರುಗ್ರಾಮದಲ್ಲಿ ಟೆನಿಸ್ ಅಕಾಡೆಮಿ ತೆರೆದಿದ್ದರು. ಇದರಿಂದ ಅವರಿಗೆ ಸಾಕಷ್ಟು ಆದಾಯವೂ ಲಭ್ಯವಾಗುತ್ತಿತ್ತು. ‘ಮಗಳ ಸಂಪಾದನೆಯಿಂದ ತಂದೆ ಬದುಕುತ್ತಿದ್ದಾನೆ’ ಎಂದು ನೆರೆಹೊರೆಯವರು ಕುಹಕವಾಡುತ್ತಿದ್ದರು. ಈ ಕಾರಣಕ್ಕೂ ಹತ್ಯೆ ಮಾಡಿರಬಹುದು ಎನ್ನಲಾಗುತ್ತಿದೆ.
ರಾಧಿಕಾ ರಾಷ್ಟ್ರೀಯ ಟೆನಿಸ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದು, ಹಲವಾರು ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲೂ ಭಾಗವಹಿಸಿದ್ದರು.