ಬಿಹಾರದಲ್ಲೂ ಚುನಾವಣೆ ಹೈಜಾಕ್‌ ಮಾಡಲು ಬಿಜೆಪಿ ಹುನ್ನಾರ: ರಾಹುಲ್‌ ಗಾಂಧಿ ಆರೋಪ

Most read

ಭುವನೇಶ್ವರ: ಮಹಾರಾಷ್ಟ್ರದಲ್ಲಿ ಆದಂತೆ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಹೈಜಾಕ್‌ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್‌ ಮುಖಂಡ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಭುವನೇಶ್ವರದಲ್ಲಿ ನಡೆದ ‘ಸಂವಿಧಾನ್ ಬಚಾವೋ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ‘ಹೈಜಾಕ್’ ಮಾಡುವುದನ್ನು ತಡೆಯಲು ಇಂಡಿಯಾ ಮೈತ್ರಿಕೂಟ ಹೋರಾಟ ನಡೆಸಲಿದೆ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಕ್ರಮಗಳನ್ನು ನಡೆಸಿ ಅಧಿಕಾರ ಹಿಡಿಯಿತು. ಇದೇ ಮಾದರಿಯಲ್ಲಿ ಬಿಹಾರದಲ್ಲೂ ಚುನಾವಣೆಯನ್ನು ಹೈಜಾಕ್ ಮಾಡಿ ಅಧಿಕಾರ ಹಿಡಿಯಲು ಪ್ರಯತ್ನಗಳನ್ನು ನಡೆಸುತ್ತಿದೆ. ಈ ಮೂಲಕ ಬಿಜೆಪಿ ಚುನಾವಣೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ. ದೇಶಾದ್ಯಂತ ಬಿಜೆಪಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ ಎಂದು ರಾಹುಲ್‌ ವಾಗ್ದಾಳಿ ನಡೆಸಿದರು.

ಭಾರತದ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ತನ್ನ ಕರ್ತವ್ಯವನ್ನು ಮರೆತು ಬಿಜೆಪಿ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಐವರು ಬಂಡವಾಳಶಾಹಿಗಳಿಗಾಗಿ ಬಿಜೆಪಿ ಸರ್ಕಾರವನ್ನು ನಡೆಸುತ್ತಿದೆಯೇ ಹೊರತು ದೇಶದ ಸಾಮಾನ್ಯ ಜನರಿಗೆ ಅಲ್ಲ ಎಂದು ರಾಹುಲ್ಆರೋಪಿಸಿದರು.

ಜಲ್, ಜಂಗಲ್, ಜಮೀನ್‘ (ನೀರು, ಅರಣ್ಯ ಮತ್ತು ಭೂಮಿ) ಬುಡಕಟ್ಟು ಜನಾಂಗಕ್ಕೆ ಸೇರಿದ್ದಾಗಿದೆ. ಈ ಸಂಪನ್ಮೂಲಗಳು ಅವರಿಗಾಗಿಯೇ ಉಳಿಯಬೇಕು. ಒಡಿಶಾದಲ್ಲಿ ಬಿಜೆಪಿ ಸರ್ಕಾರವು 1996 ಪಂಚಾಯತ್ ಕಾಯ್ದೆಯನ್ನು ಅನುಷ್ಠಾನಗೊಳಿಸಿಲ್ಲ. ಬಿಜೆಡಿ ತನ್ನ ಅಧಿಕಾರಾವಧಿಯಲ್ಲಿ ಮಾಡಿದ್ದಂತೆಯೇ ಒಡಿಶಾವನ್ನು ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ರಾಹುಲ್ಹೇಳಿದ್ದಾರೆ.

ಕಾಂಗ್ರೆಸ್ ಬುಡಕಟ್ಟು ಮಸೂದೆಯನ್ನು ಜಾರಿಗೆ ತಂದಿದ್ದು, ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಬುಡಕಟ್ಟು ಜನಾಂಗದವರಿಗೆ ಅವರ ಭೂಮಿ ಸಿಗುವಂತೆ ಮಾಡುತ್ತದೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

More articles

Latest article