ಮೈಸೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿ ಯ ಚನ್ನರಾಯಪಟ್ಟಣದ ಕೃಷಿ ಜಮೀನು ವಶಪಡಿಸಿಕೊಳ್ಳುವ ವಿಷಯಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿರುವುದು ಅನುಮಾನ ಮೂಡಿಸುತ್ತದೆ ಎಂದು ಹೋರಾಟಗಾರ, ನಟ ಪ್ರಕಾಶ ರಾಜ್ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ರೈತ ಹೋರಾಟದ ವಿಚಾರದಲ್ಲಿ ಜುಲೈ 15ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಾವಕಾಶ ಕೇಳಿದ್ದರು. ಆದರೆ ಈಗ ಕೇಂದ್ರ ಸಚಿವರನ್ನು ಭೇಟಿ ಮಾಡಿರುವುದು ಶಂಕಾಸ್ಪದವಾಗಿದೆ ಎಂದರು.
ದೇವನಹಳ್ಳಿಯಲ್ಲಿ ರೈತರ ಜಮೀನು ವಶಪಡಿಸಿಕೊಂಡು ಅಲ್ಲಿ 1700 ಎಕರೆಯಲ್ಲಿ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ರಾಜ್ಯ ಸರ್ಕಾರ ಈಗ ಕೇಂದ್ರದ ಅನುಮತಿ ಕೇಳಿದೆ. ಕಾರಿಡಾರ್ ಗೆ ಇಷ್ಟೊಂದು ಭೂಮಿಯ ಅಗತ್ಯ ಇದೆಯೇ ? ಎಷ್ಟು ಜಾಗ ಬೇಕು ಎಂಬುದನ್ನು ಅವರು ನಕ್ಷೆ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಡಿಫೆನ್ಸ್ ಕಾರಿಡಾರ್ ಗೆ ಕೇವಲ 100 ಎಕರೆ ಸಾಕಾಗುತ್ತದೆ. ಆಸರೆ ಈ ಕಂಪನಿ ಉಳಿದ ಜಮೀನಿನಲ್ಲಿ ಐಷಾರಾಮಿ ಹೋಟೆಲ್ ಕಟ್ಟುತ್ತಾರೆ. ಅಲ್ಲಿ ನಮ್ಮ ರೈತರು ಕೂಲಿಯಾಳುಗಳಾಗಬೇಕಾಗುತ್ತದೆ ಎಂದು ಪ್ರಕಾಶ್ ರೈ ಎಚ್ಚರಿಸಿದರು.
ಅನಾಮಧೇಯ ಮೂವರು ರೈತರನ್ನು ಕರೆ ತಂದು ಚಳವಳಿ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಪುಡಾರಿಗಳನ್ನು ಕಳುಹಿಸಿ ರೈತರನ್ನು ಹೆದರಿಸಲಾಗುತ್ತಿದೆ. ಹಸಿರು ವಲಯ ಮಾಡುತ್ತೇವೆ ಎಂಬ ನಾಟಕ ಆಡಿ ಜನರನ್ನು ಹೆದರಿಸುತ್ತಿದೆ. ನಿಮ್ಮ ನಾಟಕ ನಮಗೆ ಕಾಣಿಸುತ್ತಿದೆ. ಇದೇ 15 ರಂದು ರೈತ ಪರ ನಿರ್ಧಾರ ಪ್ರಕಟಿಸದೇ ಇದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂಘಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಗುರುಪ್ರಸಾದ್ ಕೆರಗೋಡು ಉಪಸ್ಥಿತರಿದ್ದರು.