ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಿಸಲು ಶಿಕ್ಷಣ ಇಲಾಖೆ ಹಲವಾರು ಕ್ರಮಗಳನ್ನು ಅನುಸರಿಸಲು ಮುಂದಾಗಿದೆ. ನಿಗಧಿತ ಅವದಿಯೊಳಗೆ ಪಠ್ಯ ಬೋಧನೆ ಪೂರ್ಣ, ಪರಿಹಾರ ಬೋಧನೆ, ಪರೀಕ್ಷಾ ತಯಾರಿ, ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಶಾಲಾ ಮೇಲ್ವಿಚಾರಣೆ ಸೇರಿದಂತೆ 29 ಅಂಶಗಳ ಕ್ರಿಯಾ ಯೋಜನೆಯ ಸುತ್ತೋಲೆಯನ್ನು ಹೊರಡಿಸಿದೆ.
ಕಳೆದ ಎರಡು ವರ್ಷಗಳಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿತ ಹಿನ್ನೆಲೆಯಲ್ಲಿ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಕಾರ, ಎಲ್ಲಾ ಶಾಲೆಗಳು ಡಿಸೆಂಬರ್ 2025 ರೊಳಗೆ SSLC ಪಠ್ಯಕ್ರಮವನ್ನು ಪೂರ್ಣಗೊಳಿಸುವುದನ್ನು ಕಡ್ಡಾಯ ಮಾಡಲಾಗಿದೆ.
- ಡಿಸೆಂಬರ್ ಅಂತ್ಯದೊಳಗೆ ಪಠ್ಯ ಬೋಧನೆ ಪೂರ್ಣಗೊಳಿಸಬೇಕು.
- ಎರಡು ತಿಂಗಳಿಗೊಮ್ಮೆ ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಕಲಿಕಾ ಮಟ್ಟ ಬಗ್ಗೆ ಮಾಹಿತಿ ನೀಡಿ ಮನೆಯಲ್ಲೂ ವ್ಯಾಸಂಗಕ್ಕೆ ಹೆಚ್ಚಿನ ಉತ್ತೇಜನ ನೀಡಲು ತಿಳಿಸಬೇಕು.
- ಡಯಟ್ ಅಧಿಕಾರಿಗಳು ವಾರದಲ್ಲಿ ಐದು ದಿನ ಶಾಲೆಗಳಿಗೆ ಭೇಟಿ ನೀಡಿ ಪರಿಹಾರ ಬೋಧನಾ ತರಗತಿಗಳಲ್ಲಿ ಭಾಗವಹಿಸಬೇಕು.
- ಮಕ್ಕಳಿಂದ ಗಟ್ಟಿಯಾಗಿ ಓದಿಸುವ ಅಭ್ಯಾಸ ಮಾಡಿಸುವುದು, ಇದರಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಹೆಚ್ಚು ಎಂಬ ಮೂರು ಗುಂಪುಗಳನ್ನು ರಚಿಸಬೇಕು. ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡಬೇಕು.
- ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೆ ಗುಂಪು ಅಧ್ಯಯನ ಚಟುವಟಿಕೆಗಳನ್ನು ರೂಪಿಸಬೇಕು,
- ಮಧ್ಯವಾರ್ಷಿಕ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳನ್ನು ವೆಬ್ ಕಾಸ್ಟಿಂಗ್ ಕಣ್ಣಾವಲಿನಲ್ಲಿ ನಡೆಸಬೇಕು.
- ಪ್ರತಿದಿನ ಮುಂಜಾನೆ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದುನ್ನು ಪರಿಶೀಲಿಸಲು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ವೇಕ್ ಅಪ್ ಕಾಲ್ ಮಾಡಬೇಕು.
- ಒತ್ತಡ ನಿವಾರಣೆಗೆ ವಾರದಲ್ಲಿ ಕನಿಷ್ಠ ಒಂದು ಅವಧಿಯನ್ನು ಕ್ರೀಡೆಗೆ ಮೀಸಲಿಡುವುದು.
- ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ಗೀಳು ತಪ್ಪಿಸಬೇಕು.
- ಹಿಂದಿನ ವರ್ಷಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ದೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಕ್ರಿಯಾ ಯೋಜನೆ ರೂಪಿಸಬೇಕು.
- ಶೂನ್ಯ ಫಲಿತಾಂಶ ಪಡೆದ ಶಾಲೆಗಳು, ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಬಿಇಓ ಮತ್ತು ಡಿಡಿಪಿಐಗಳು ನಿರಂತರವಾಗಿ ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು