ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನರಿಗೆ ಅಭಯ ನೀಡಿದರು.
ಹೃದಯಾಘಾತ ಬಗ್ಗೆ ಜನರು ಆತಂಕ ಪಡಬೇಡಿ. ಮಾಧ್ಯಮದಲ್ಲಿ ಇದರ ಬಗ್ಗೆ ಹೆಚ್ಚು ವೈಭವೀಕರಿಸಲಾಗುತ್ತಿದೆ. ಜನರಿಗೆ ಭೀತಿ ಉಂಟಾಗುವುದು ಸಹಜ. ಆದರೆ ವೈದ್ಯರು ಹಾಗೂ ಇಲಾಖೆಯ ಅಧಿಕಾರಿಗಳು ನೀಡುವ ಸಲಹೆಗಳನ್ನು ಪಾಲಿಸಿ ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರು ನಿಯಮಿತ ಆಹಾರ, ಪೌಷ್ಟಿಕಯುಕ್ತ ಆಹಾರ, ವ್ಯಾಯಾಮ ಹಾಗೂ ಯೋಗ ಹಾಗೂ ಇತರೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಜೀವನ ಶೈಲಿಯನ್ನು ಆದಷ್ಟು ಬಳಸಿಕೊಳ್ಳಿ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದು ಮಾಹಿತಿ ನೀಡಿದರು.
ಆದಷ್ಟು ಜಂಕ್ ಫುಡ್, ದುರಭ್ಯಾಸಗಳನ್ನು ಮಾಡಬೇಕು. ಕರಿದ ಪದಾರ್ಥಗಳ ಸೇವನೆ ನಿಯಂತ್ರಣ ಮಾಡಿಕೊಳ್ಳುವ ಮೂಲಕ ಆರೋಗ್ಯ ಸಂರಕ್ಷಿಸಕೊಳ್ಳಬಹುದು. ಜನರು ಎಚ್ಚರದಿಂದಿರಿ, ಸುರಕ್ಷಿತವಾಗಿರಿ. ಆತಂಕದಿಂದ ದೂರವಿರಿ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸಲಹೆ ನೀಡಿದರು.