ಹೈದರಾಬಾದ್: ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳ ರಾಯಭಾರಿಗಳಾಗಿ ಹಾಗೂ ಬೆಟ್ಟಿಂಗ್ ಆ್ಯಪ್ ಗಳ ಮೂಲಕ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪ್ರಕಾಶ್ ರೈ, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಮತ್ತು ಸೇರಿ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣದ ದಾಖಲಿಸಿ ಕೊಂಡಿದೆ.
ಇಡಿ ದಾಖಲಿಸಿಕೊಂಡಿರುವ ದೂರಿನಲ್ಲಿ ಮಂಚು ಲಕ್ಷ್ಮಿ, ರಾಜ್, ನಿಧಿ ಅಗರವಾಲ್, ಪ್ರಣೀತಾ ಸುಭಾಸ್, ಅನನ್ಯಾ ನಾಗಲ್ಲಾ, ಟಿವಿ ನಿರೂಪಕಿ ಶ್ರೀಮುಖಿ, ಶ್ಯಾಮಲಾ, ವರ್ಷಿಣಿ ಸೌಂದರರಾಜನ್, ಸಿರಿ ಹನುಮಂತು, ವಾಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪರಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣುಪ್ರಿಯ, ಹರ್ಷಸಾಯಿ, ಭಯ್ಯಾ ಸನ್ನಿ ಯಾದವ್, ಟೇಸ್ಟ್ ತೇಜಾ, ರಿತು ಚೌಧರಿ, ಬಂಡಾರು ಸುಪ್ರಿತಾ ಅವರ ಹೆಸರುಗಳೂ ಉಲ್ಲೇಖವಾಗಿವೆ.
ಐದು ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಇದರಲ್ಲಿ ಆರೋಪಿತರು ಬೆಟ್ಟಿಂಗ್ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ.
ಜನಪ್ರಿಯತೆ ಹೊಂದಿರುವ ಇವರು ಆನ್ಲೈನ್ ಬೆಟ್ಟಿಂಗ್ ಆ್ಯಪ್ ಗಳಾದ ಜಂಗಲ್ ರಮ್ಮಿ, ಜೀತ್ ವಿನ್, ಲೋಟಸ್ 365 ಸೇರಿದಂತೆ ಹಲವು ಆ್ಯಪ್ಗಳ ಪರ ಪ್ರಚಾರ ನಡೆಸಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆ್ಯಪ್ ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದು ತಿಳಿದಿಲ್ಲ ಹಾಗೂ ಕಾನೂನು ಬಾಹಿರವಾದ ಬೆಟ್ಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ ಎಂದು ಕೆಲವು ನಟ ನಟಿಯರು ಸ್ಪಷಟನೆ ನೀಡಿದ್ದರು.
ಆನ್ ಲೈನ್ ಬೆಟ್ಟಿಂಗ್ ಕುರಿತು ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಎಫ್ ಐ ಆರ್ಗಳನ್ನು ಸಂಗ್ರಹಿಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಆ್ಯಪ್ ಗಳು ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕಲೆ ಹಾಕಲಾಗುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ.