ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ದಿ. ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದಲ್ಲಿರುವ ಮನೆಯನ್ನು ನವೀಕರಣಗೊಳಿಸಿ, ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದ್ದಾರೆ.
ಎಸ್. ನಿಜಲಿಂಗಪ್ಪನವರ ನಿವಾಸ, ಸ್ಮಾರಕ ಹಾಗೂ ತಾಲ್ಲೂಕಿನ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿವಾಸ ಖರೀದಿಗೆ ಸರ್ಕಾರ ರೂ.5 ಕೋಟಿ ಅನುದಾನ ನೀಡಿತ್ತು. ಇದರಲ್ಲಿ ಇಲಾಖೆಯಿಂದ ರೂ.4.18 ಕೋಟಿಗೆ ನಿವಾಸವನ್ನು ಖರೀದಿಸಲಾಗಿದ್ದು, ಉಳಿದ 82 ಲಕ್ಷ ಅನುದಾನದಲ್ಲಿ ಮನೆಯನ್ನು ನವೀಕರಣಗೊಳಿಸಲಾಗುವುದು ಎಂದರು.
ರಾಷ್ಟ್ರ ಮತ್ತು ರಾಜ್ಯ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಎಸ್. ನಿಜಲಿಂಗಪ್ಪನವರ ಕೊಡುಗೆ ಅಪಾರವಾದದ್ದು. ಮಹಾತ್ಮರಾದ ಎಸ್. ನಿಜಲಿಂಗಪ್ಪನವರು ಹುಟ್ಟಿ ಬೆಳೆದು, ಬದುಕಿ ಬಾಳಿದ ನಿವಾಸಕ್ಕೆ ಬೆಲೆ ಕಟ್ಟಲಾಗದು. ಅವರ ನಿವಾಸ ದೇವರ ಗುಡಿಗೆ ಸಮಾನವಾದದ್ದು. ಹಿರಿಯ ಮುಖಂಡರಾದ ಹನುಮಂತಪ್ಪ ಹಾಗೂ ಎಸ್.ನಿಜಲಿಂಗಪ್ಪನವರ ಮಗ ಕಿರಣ್ ಶಂಕರ್ ಟ್ರಸ್ಟ್ ಸ್ಥಾಪಿಸಿ, ಉತ್ತಮ ರೀತಿಯಲ್ಲಿ ಸ್ಮಾರಕವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡುವ ದೃಷ್ಟಿಯಿಂದ ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಜಿಲ್ಲಾಧಿಕಾರಿಗಳು ಕೂಡ ಉತ್ಸುಕತೆಯಿಂದ ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೂ ಕೂಡ ಈ ಕುರಿತಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಪ್ರಸ್ತುತ ರೂ.86 ಲಕ್ಷ ಅನುದಾನ ಲಭ್ಯವಿದ್ದು, ಅಗತ್ಯಬಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಒದಗಿಸಲಾಗುವುದು ಎಂದು ಹೇಳಿದರು. ಕೋಟೆನಾಡು ಚಿತ್ರದುರ್ಗಕ್ಕೆ ಭೇಟಿ ನೀಡುವವರು ಎಸ್. ನಿಜಲಿಂಗಪ್ಪ ಅವರ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು..
ಸರ್ಕಾರ ಮಠಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿಲ್ಲ. ನಿಯಮಾನುಸಾರ ಸರ್ಕಾರ ಶೇ.25 ಹಣವನ್ನು ಮೀಸಲಿರಿಸಿ ಅನುದಾನ ಘೋಷಿಸಿಬೇಕು. ಸರ್ಕಾರ ಹಣಕಾಸಿನ ಶಿಸ್ತು ಪಾಲನೆ ಮಾಡುತ್ತಿದೆ. ಇದೇ ರೀತಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ ಮಂಡಳಿಗಳನ್ನು ಸ್ಥಾಪಿಸಲು ರೂ.5 ಕೋಟಿ ಮೂಲಧನ ಇರಿಸಬೇಕು. ಇತ್ತೀಚೆಗೆ ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು ರೂ.5 ಕೋಟಿ ನೀಡಿ, ಕಂಪನಿ ನೊಂದಣಿ ಕಾಯ್ದೆಯಡಿ ದೆಹಲಿಯಲ್ಲಿ ನೊಂದಣಿ ಮಾಡಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ನ ಗೌರವಾಧ್ಯಕ್ಷ ಹೆಚ್.ಹನುಮಂತಪ್ಪ, ಗೌರವ ಕಾರ್ಯದರ್ಶಿ ಕಿರಣ್ ಶಂಕರ್, ಟ್ರಸ್ಟಿಗಳಾದ ಮೋಹನ್ ಕುಮಾರ್ ಕೊಂಡಜ್ಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.