ಬೆಂಗಳೂರು: ಹಲವು ವ್ಯಾಪಾರಿಗಳಿಗೆ ಚಿನ್ನಾಭರಣ ವಂಚಿಸಿರುವ ಐಶ್ವರ್ಯಾ ಗೌಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ಅವರು ಇಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದರು.
ಜೂನ್ 17ರಂದು ಇ.ಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಅದರ ಪ್ರಕಾರ ಇಂದು ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಸುರೇಶ್ ವಿಚಾರಣೆಗೆ ಹಾಜರಾಗಿದ್ದರು.
ನಂತರ ಮಾತನಾಡಿದ ಅವರು ಇಡಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆಸ್ತಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಗಳನ್ನು ಅಧಿಕಾರಿಗಳು ಕೇಳಿದ್ದರು. ಅವನ್ನೂ ನೀಡಿದ್ದೇನೆ ಎಂದು ಉತ್ತರಿಸಿದರು. ನನಗೂ ಐಶ್ವರ್ಯಾ ಗೌಡಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಹೀಗಿದ್ದೂ ಅವರ ವಂಚನೆ ಪ್ರಕರಣಕ್ಕೆ ನನ್ನನ್ನು ಏಕೆ ಥಳಕು ಹಾಕುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಆದರೂ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಕೆಲವು ಚಿನ್ನಾಭರಣ ವ್ಯಾಪಾರಿಗಳಿಂದ ಐಶ್ವರ್ಯಾ ಗೌಡ ಚಿನ್ನ ಮತ್ತು ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಕೊಡಿಸುತ್ತೇನೆ ಎಂದು ನಂಬಿಸಿ ಚಿನ್ನ ಪಡೆದುಕೊಂಡಿದ್ದರು. ನಂತರ ಹಣ ಮತ್ತು ಚಿನ್ನ ಎರಡನ್ನೂ ಹಿಂತಿರುಗಿಸಿರಲಿಲ್ಲ. ಈ ಸಂಬಂಧ ಚಿನ್ನಾಭರಣ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಹಣ ವಾಪಸ್ ಕೇಳಿದಾಗ, ತಾನು ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿ ಬೆದರಿಕೆ ಹಾಕಿದ್ದರು.
ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಡಿ.ಕೆ.ಸುರೇಶ್ ಅವರು ಸಹ ಪೊಲೀಸರಿಗೆ ದೂರು ನೀಡಿದ್ದರು.
ಐಶ್ವರ್ಯಾ ಗೌಡ ವಿರುದ್ಧ ದಾಖಲಾಗಿದ್ದ ದೂರಿನ ಸಂಬಂಧ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಉದ್ಯಮಿಗಳು ಮತ್ತು ಐಶ್ವರ್ಯ ಅವರ ಮನೆಯಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಐಶ್ವರ್ಯ ಅವರ ಮನೆಯಿಂದ ರೂ.2.25 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದರು.