ವಿಶ್ವದ ಕ್ವಾಂಟಮ್‌ ಕ್ಷೇತ್ರದ ಪ್ರಮುಖ ಹಬ್‌ ಆಗಿ ಕರ್ನಾಟಕ : ಸಚಿವ ಎನ್‌ ಎಸ್‌ ಭೋಸರಾಜು

Most read

ಬೆಂಗಳೂರು: ರಾಜ್ಯವನ್ನು ವಿಶ್ವದ ಕ್ವಾಂಟಮ್‌ ಕ್ಷೇತ್ರದ ಪ್ರಮುಖ ಹಬ್‌ ಆಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ “ಕರ್ನಾಟಕ ಕ್ವಾಂಟಮ್‌ ಆಕ್ಷನ್‌ ಪ್ಲಾನ್‌” ಸಿದ್ದಪಡಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ ಎಸ್‌ ಭೋಸರಾಜು ತಿಳಿಸಿದರು. ಅವರು ಇಂದು ನೆಹರು ತಾರಾಲಯದಲ್ಲಿ ಆಯೋಜಿಸಲಾಗಿದ್ದ ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶದ ಕರ್ಟನ್‌ ರೈಸರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಮುಂಚೂಣಿ ರಾಜ್ಯವನ್ನಾಗಿ ರೂಪಿಸುವಲ್ಲಿ ಬದ್ಧವಾಗಿದೆ. ಈ ಸಂಬಂಧ ಕರ್ನಾಟಕವನ್ನು ಕ್ವಾಂಟಮ್ ರಾಜಧಾನಿಯನ್ನಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ರೂಪುರೇಷಗಳನ್ನು ಸಿದ್ದಪಡಿಸಲು ನಮ್ಮ ಸರ್ಕಾರ ಮುಂದಡಿ ಇಟ್ಟಿದೆ. ಐಟಿ, ಏರೋಸ್ಪೇಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುಂತೆ ಕ್ವಾಂಟಮ್ ಕ್ಷೇತ್ರದಲ್ಲೂ ನಮ್ಮ ರಾಜ್ಯದ ಛಾಪು ಮೂಡಿಸುವ ಸಲುವಾಗಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಕ್ವಾಂಟಮ್ ತಂತ್ರಜ್ಞಾನ ತನ್ನ ಛಾಪನ್ನು ಮೂಡಿಸಿ, ಆರ್ಥಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಬೆಂಗಳೂರು ಭಾರತದ ನಾವಿನ್ಯತೆಯ ರಾಜಧಾನಿಯಾಗಿರುವ ಜೊತೆಗೇ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕ ಸೌಕರ್ಯಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ ಜುಲೈ 31 ಹಾಗೂ ಆಗಸ್ಟ್‌ 1 ರಂದು ಎರಡು ದಿನಗಳ ಕಾಲ ‘ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನ” ವನ್ನು ಆಯೋಜಿಸಲಾಗಿದೆ ಎಂದರು.

ದೇಶದಲ್ಲೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಈ ಸಮ್ಮೇಳನದಲ್ಲಿ ಕ್ವಾಂಟಮ್‌ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವಂತ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿರವಂತಹ ಪ್ರೊ. ಡಂಕನ್‌ ಹಲ್ದಾನೆ (Prof. Duncan Haldane – 2016 Noble Lauteate) ಹಾಗೂ ಪ್ರೊ. ಡೇವಿಡ್‌ ಗ್ರಾಸ್‌ (Prof. David Gross – 2004 Nobel Laureate) ಭಾಗವಹಿಸಲಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕ ರಾಜ್ಯ ಕ್ವಾಂಟಮ್‌ ಕ್ಷೇತ್ರದಲ್ಲಿ ಇನ್ನಿತರ ರಾಜ್ಯಗಳಿಗಿಂತಲೂ ಗಣನೀಯವಾದ ಸಾಧನೆ ಮಾಡಿದೆ. ಬೆಂಗಳೂರಿನಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಪರಿಣಿತಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಅಭಿವೃದ್ದಿ, ರಾಜ್ಯವನ್ನು ಏಷ್ಯಾದ ಕ್ವಾಂಟಮ್‌ ಹಬ್ ಆಗಿ ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧನೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯವ ನಿಟ್ಟಿನಲ್ಲಿ “ಕರ್ನಾಟಕ ಕ್ವಾಂಟಮ್‌ ಆಕ್ಷನ್‌ ಪ್ಲಾನ್‌” ಸಹಕಾರಿಯಾಗಲಿದೆ. ಈ ಆಕ್ಷನ್‌ ಪ್ಲಾನ್‌ ರೂಪಿಸಲು ಕ್ವಾಂಟಮ್‌ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವಂತಹ ವ್ಯಕ್ತಿಗಳ ಟಾಸ್ಕ್‌ ಫೋರ್ಸನ್ನು ರಚಿಸಲಾಗುವುದು ಎಂದರು.

ಕರ್ನಾಟಕ ಕ್ವಾಂಟಮ್‌ ಆಕ್ಷನ್‌ ಪ್ಲಾನ್‌ನ ಪ್ರಮುಖ ಅಂಶಗಳು:

– ಕ್ವಾಂಟಮ್‌ ಶಿಕ್ಷಣವನ್ನು ವಿವಿಧ ಹಂತದ ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಅಳವಡಿಸುವುದು

– ಐಐಎಸ್‌ಸಿ ಮುಂತಾದ ಅಗ್ರಗಣ್ಯ ಸಂಸ್ಥೆಗಳ ಸಹಕಾರದಲ್ಲಿ ಆಧುನಿಕ ಸಂಶೋಧನಾ ಸೌಕರ್ಯಗಳನ್ನು ಸ್ಥಾಪಿಸುವುದು

– ಕ್ವಾಂಟಮ್‌ ಕಂಪ್ಯೂಟಿಂಗ್‌, ಸಂವಹನ, ಕ್ರಿಪ್ಟೋಗ್ರಪಿ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್‌ಅಪ್‌ಗಳು ಮತ್ತು ಕೈಗಾರಿಕೆಗಳಿಗೆ ಬೆಂಬಲ ನೀಡುವುದು

– ಈ ಕ್ಷೇತ್ರದ ಉತ್ತೇಜನಕ್ಕೆ ಅಗತ್ಯವಿರುವಂತಹ ನೀತಿಗಳು ಹಾಗೂ ಕಾನೂನು ರೂಪಿಸುವುದು

ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶ 2025:

ಜುಲೈ 31 ಹಾಗೂ ಆಗಸ್ಟ್‌ 1 ರಂದು ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶ 2025 ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಚಾಲನೆ ನೀಡಲಿದ್ದಾರೆ. ಮೊದಲ ದಿನ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿರವಂತಹ ಪ್ರೊ. ಡಂಕನ್‌ ಹಲ್ದಾನೆ (Prof. Duncan Haldane – 2016 Noble Lauteate) ಪ್ರಧಾನ ಭಾಷಣ ನೀಡಲಿದ್ದಾರೆ. ನಂತರ ಎರಡು ದಿನಗಳ ಈ ಸಮಾವೇಶದಲ್ಲಿ ಕ್ವಾಂಟಮ್‌ ಇನ್‌ ಕಂಪ್ಯೂಟಿಂಗ್‌, ಫೈನಾನ್ಸ್‌ ಮತ್ತು ಎಐ – ಕ್ವಾಂಟಮ್‌ ಇನ್‌ ಹೆಲ್ತ್‌ ಕೇರ್‌, ಕ್ವಾಂಟಮ್‌ ಇನ್‌ ಪೆರಿಫೇರಿಲ್ಸ್‌ ಅಂಡ್‌ ಹಾರ್ಡ್‌ವೇರ್‌, ಕ್ವಾಂಟಮ್‌ ಇನ್‌ ಸೊಸೈಟಿ ಅಂಡ್‌ ಆರ್ಟ್‌, ಕ್ವಾಂಟಮ್‌ ಇನ್‌ ಸೆಕ್ಯೂರಿಟಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಜ್ಞರಿಂದ ಮಾಹಿತಿಯ ವಿನಿಮಯವಾಗಲಿದೆ. 

ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ ಕೌರ್, ಕೆಸ್ಟೆಪ್ಸ್‌ ನಿರ್ದೇಶಕ ಸದಾಶಿವ ಪ್ರಭು, ಸಮ್ಮೇಳನದ ಸಂಚಾಲಕ ಪ್ರೊ. ಅರಿಂದಮ್ ಘೋಷ್, ಸಹಸಂಚಾಲಕ ಪ್ರೊ. ಅಕ್ಷಯ್ ನಾಯ್ಕ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

More articles

Latest article