ಬೆಂಗಳೂರು: ಖಾಸಗಿ ಕಂಪನಿ, ಕಾರ್ಖಾನೆ ಮಾತ್ರವಲ್ಲದೆ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲೂ ನವ ಜಾತಿವಾದ ಅಸ್ತಿತ್ವದಲ್ಲಿದ್ದು, ಈ ಪಿಡುಗನ್ನು ಹೋಗಲಾಡಿಸಲು ಹೋರಾಟ ಅನಿವಾರ್ಯ ಎಂದು ಎಐಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಪ್ಟನ್ ಡಿ ರೊಜರಿಯೊ ಹೇಳಿದ್ದಾರೆ.
ನಾಲ್ಕು ಕಾರ್ಮಿಕ ಕೋಡ್ ಗಳ ವಿರುದ್ಧ ಮತ್ತು ಗುತ್ತಿಗೆ ಕಾರ್ಮಿಕ ವ್ಯವಸ್ಥೆ ರದ್ದತಿಗಾಗಿ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಕಾಯಮೇತರ ಕಾರ್ಮಿಕರ ಸಂಯುಕ್ತ ವೇದಿಕೆ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಯಾ ಸಂಸ್ಥೆಗಳ ಬಸ್ ಗಳಲ್ಲಿ ಕಾರ್ಮಿಕರನ್ನು ಸಾಗಿಸುವಾಗ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ಕುಳೀತುಕೊಳ್ಳುವಂತಿಲ್ಲ. ಒಂದು ವೇಳೆ ಕುಳಿತಿದ್ದರೂ ಕಾಯಂ ನೌಕರರು ಬಂದಾಗ ಬಿಟ್ಟುಕೊಡಬೇಕು. ಕ್ಯಾಂಟೀನ್ ಗಳಲ್ಲೂ ಕಾಯಂ ನೌಕರರಿಗೆ ಮೊದಲು ಊಟ ತಿಂಡಿ ಪೂರೈಕೆ ಮಾಡಬೇಕು. ಎಚ್ ಎಎಲ್ ಸಹಿತ ಕೆಲವು ಸಂಸ್ಥೆಗಳಲ್ಲಿ ಕಾರ್ಮಿಕರು ಇಂತಹ ತಾರತಮ್ಯಕ್ಕೆ ಬಗ್ಗದೇ ಪ್ರತಿಭಟನೆ ನಡೆಸಿ ಯಶಸ್ವಿಯಾಗಿದ್ದಾರೆ. ಇನ್ನೂ ಹಲವು ಕಂಪನಿಗಳಲ್ಲಿ ಈ ಪರಿಸ್ಥಿತಿ ಅಸ್ತಿತ್ವದಲ್ಲಿದೆ. ಜಾತಿ ಪದ್ಧತಿಗಳಲ್ಲಿ ಗೌರವ, ಅವಕಾಶಗಳಲ್ಲಿ ಯಾವ ರೀತಿಯ ತಾರತಮ್ಯ ಇದೆಯೋ ಅದರ ಇನ್ನೊಂದು ರೂಪ ಇದಾಗಿದೆ ಎಂದು ವಿವರಿಸಿದರು.
ಖಾಸಗಿ ಸಂಸ್ಥೆಗಳಲ್ಲಿ ಮೊದಲು ಗುತ್ತಿಗೆ ಪದ್ಧತಿ ಜಾರಿಗೆ ಬಂತು. ಅದನ್ನೇ ಕ್ರಮೇಣ ಸರ್ಕಾರಿ ಸಂಸ್ಥೆಗಳಲ್ಲಿಯೂ ಜಾರಿಗೊಳಿಸಲಾಯಿತು. ಕಾಯಂ ಕೆಲಸಗಳಲ್ಲಿ ಗುತ್ತಿಗೆ ಪದ್ಧತಿ ಇರಬಾರದು ಎಂಬ ನಿಯಮ ಇದೆ. ಇದರ ಆಧಾರದಲ್ಲಿ ಕಾಯಂ ಮಾಡಿ ಎಂದು ಕಾರ್ಮಿಕರು ಹಕ್ಕು ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕರ ನಾಲ್ಕು ಕೋಡ್ ಗಳು ಜಾರಿಗೆ ಬಂದರೆ ಕಾಯಂ ಮಾಡಿ ಎಂದು ಕೇಳುವ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಾಲಿ ಇರುವ ಕಾರ್ಮಿಕ ಕಾಯ್ದೆಗಳನ್ನು ತೆಗೆದು ಜಾರಿ ಮಾಡಲು ಹೊರಟಿರುವ ನಾಲ್ಕು ಕೋಡ್ ಗಳನ್ನು ಹಿಂದಕ್ಕೆ ಪಡೆಯಬೇಕು. ಗುತ್ತಿಗೆ, ಹೊರಗುತ್ತಿಗೆ, ಅಲ್ಪಾವಧಿಯ ಕೆಲಸ ಪದ್ಧತಿಗಳನ್ನು ರದ್ದುಗೊಳಿಸಬೇಕು. ಇಎಸ್ ಐ ಪರಿಮಿತಿಯನ್ನು ರದ್ದು ಮಾಡಬೇಕು. ಕನಿಷ್ಠ ವೇತನ ರೂ. 42,000 ನೀಡಬೇಕು. ಸಂಘಟನೆ ಮಾಡುವ ಹಕ್ಕು, ಹೋರಾಟದ ಹಕ್ಕು, ಮುಷ್ಕರದ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ದೇಶದಾದ್ಯಂತ ಜುಲೈ 9ರಂದು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಅವರು ತಿಳಿಸಿದರು.