ಒಪಿಎಸ್‌ ಜಾರಿಗೆ ಸರ್ಕಾರ ಬದ್ಧ: ಸಚಿವ ಡಾ.ಜಿ.ಪರಮೇಶ್ವರ

Most read

ತುಮಕೂರು: ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ರಚಿಸಿದ ಸಮಿತಿಯು ಆದಷ್ಟು ತ್ವರಿತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಯುವಕರ ಮುಂದೆ ಸ್ಪರ್ಧಾತ್ಮಕ ಯುಗ ತೆರೆಯಲ್ಪಟ್ಟಿದೆ.  ದೇಶ ಕಟ್ಟಲು ನಿಮ್ಮ ಸೇವೆ ಅಗತ್ಯವಾಗಿದೆ. ನಿಮಗೆ ಸಿಕ್ಕ ಪುರಸ್ಕಾರ ಒಂದು ರೀತಿಯ ಎಚ್ಚರಿಕೆ ಎಂದು ಭಾವಿಸಬೇಕು ಎಂದರು.

ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಇಡೀ ಪ್ರಪಂಚ ದೇಶದ ಕಡೆಗೆ ನೋಡುತ್ತಿರುವುದಕ್ಕೆ ಶಿಕ್ಷಣ ಕಾರಣವಾಗಿದೆ. ಹಳ್ಳಿಯಲ್ಲಿ ಕುಳಿತುಕೊಂಡು ಯಾವುದೇ ಶಾಲಾ-ಕಾಲೇಜಿಗೆ ಅರ್ಜಿ ಸಲ್ಲಿಸಬಹುದು. ದೇಶದ 140 ಕೋಟಿಯಲ್ಲಿ‌ 96 ಕೋಟಿ ಜನ ಇಂಟರ್‌ನೆಟ್ ಬಳಸುತ್ತಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಬಳಕೆದಾರರು ಇರುವ ಮತ್ತೊಂದು ರಾಷ್ಟ್ರವಿಲ್ಲ ಎಂದು ತಿಳಿಸಿದರು.

ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ,‌ ಮಾತನಾಡಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿವೆ. ಮಕ್ಕಳಿಂದ ಲಕ್ಷಾಂತರ ರೂಪಾಯಿ ದುಡ್ಡು ಪಡೆಯುತ್ತಿವೆ. ನೌಕರರ ಸಂಘದಿಂದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಆರಂಭಿಸಬೇಕು. ಮಕ್ಕಳ‌ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ನೆರವಾಗಲಿದೆ ಎಂದು ಸಲಹೆ ನೀಡಿದರು.

More articles

Latest article