ಆನ್‌ಲೈನ್‌ ಬೆಟ್ಟಿಂಗ್‌ ಗೆ ಕಡಿವಾಣ: ʼಕರ್ನಾಟಕ ಪೊಲೀಸ್‌ (ತಿದ್ದುಪಡಿ) ಮಸೂದೆ– 2025’ ಗೆ ತಿದ್ದುಪಡಿ

Most read

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಆನ್‌ ಲೈನ್‌ ಬೆಟ್ಟಿಂಗ್‌ (ಜೂಜಾಟ) ಮತ್ತು ಗೇಮಿಂಗ್‌ ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ಪೊಲೀಸ್‌ (ತಿದ್ದುಪಡಿ) ಮಸೂದೆ– 2025’ರ ಕರಡು ಸಿದ್ಧಪಡಿಸಿದ್ದು ವಿಧಾನಮಂಡಲದ ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸರ್ಕಾರ ಮುಂದಾಗಿದೆ.

ಕರ್ನಾಟಕ ಪೊಲೀಸ್‌ ಕಾಯ್ದೆ –1963ಕ್ಕೆ ತಿದ್ದುಪಡಿ ಮಾಡುವ ಮೂಲಕ ಆನ್‌ ಲೈನ್ ಬೆಟ್ಟಿಂಗ್‌ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಹೇರಲು ಈ ಮಸೂದೆಯನ್ನು ಸರ್ಕಾರ ರಚಿಸಿದೆ. ಜತೆಗೆ, ರಾಜ್ಯ ಸರ್ಕಾರ ಕರ್ನಾಟಕ ಆನ್‌ ಲೈನ್‌ ಗೇಮಿಂಗ್‌ ಮತ್ತು ಬೆಟ್ಟಿಂಗ್‌ ನಿಯಂತ್ರಣ ಪ್ರಾಧಿಕಾರ ರಚಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆನ್‌ ಲೈನ್ ಬೆಟ್ಟಿಂಗ್‌ ನಲ್ಲಿ ತೊಡಗಿರುವ ಮತ್ತು ಪ್ರಾಧಿಕಾರದಿಂದ ಪರವಾನಗಿ ಪಡೆಯದೆ ಕೌಶಲ ಆಟಗಳ ಆನ್‌ ಲೈನ್ ವೇದಿಕೆ ನಡೆಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ.1 ಲಕ್ಷದವರೆಗೆ ದಂಡ ವಿಧಿಸಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಜಾಹೀರಾತು ಅಥವಾ ಪ್ರಚಾರದ ಮೂಲಕ ಆನ್‌ ಲೈನ್ ಬೆಟ್ಟಿಂಗ್‌ ಗೆ ಕುಮ್ಮಕ್ಕು, ಪ್ರೋತ್ಸಾಹ ನೀಡುವವರಿಗೆ, ಸಹಾಯ ಮಾಡುವವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ರೂ.10 ಸಾವಿರದವರೆಗೆ ದಂಡ ವಿಧಿಸುವ ಪ್ರಸ್ತಾವವೂ ಕರಡು ಮಸೂದೆಯಲ್ಲಿದೆ.

ಈ ತಿದ್ದುಪಡಿ ಮಸೂದೆಯಲ್ಲಿ ನಗದು, ಟೋಕನ್‌, ವರ್ಚುವಲ್ ಕರೆನ್ಸಿ ಅಥವಾ ಡಿಜಿಟಲ್‌ ಸ್ವರೂಪದ ಹಣ ಬಳಕೆಯ ಅದೃಷ್ಟ ಆಟಗಳನ್ನು ಒಳಗೊಂಡ ಎಲ್ಲ ರೀತಿಯ ಆನ್‌ ಲೈನ್ ಬೆಟ್ಟಿಂಗ್ ಅಥವಾ ಜೂಜಾಟವನ್ನು ನಿಷೇಧಿಸುವ ಪ್ರಸ್ತಾವವಿದೆ. ಇಂಟರ್‌ ನೆಟ್‌, ಮೊಬೈಲ್ ಆ್ಯಪ್‌ ಗಳು ಅಥವಾ ಇತರ ಡಿಜಿಟಲ್ ವೇದಿಕೆಗಳ ಮೂಲಕ ನಡೆಸುವ ಆಟ, ಕಾರ್ಯಕ್ರಮ ಅಥವಾ ಚಟುವಟಿಕೆಯ ಫಲಿತಾಂಶದ ಮೇಲೆ ಹಣ, ಟೋಕನ್‌ ಗಳು, ವರ್ಚುವಲ್ ಕರೆನ್ಸಿ ಅಥವಾ ಡಿಜಿಟಲ್‌ ಸ್ವರೂಪದ ಹಣವನ್ನು ಪಣಕ್ಕಿಟ್ಟು ಆಡುವುದು ಆನ್‌ ಲೈನ್ ಬೆಟ್ಟಿಂಗ್ ಆಗಿದ್ದು, ಇಲ್ಲಿ ಫಲಿತಾಂಶವು ಆಕಸ್ಮಿಕವಾಗಿ ನಿರ್ಧಾರವಾಗುತ್ತದೆ ಎಂದು ಈ ಕರಡು ಮಸೂದೆಯಲ್ಲಿ ವಿವರಿಸಲಾಗಿದೆ.

ಕಾನೂನು, ಸಾರ್ವಜನಿಕ ಆಡಳಿತ ಅಥವಾ ತಂತ್ರಜ್ಞಾನದಲ್ಲಿ ಅನುಭವ ಹೊಂದಿರುವವರನ್ನು ಈ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಬೇಕು. ಮಾಹಿತಿ ತಂತ್ರಜ್ಞಾನ, ಹಣಕಾಸು ಮತ್ತು ಸಮಾಜ ಕಲ್ಯಾಣ ಈ ಮೂರು ಕ್ಷೇತ್ರಗಳಲ್ಲಿ ಅನುಭವ ಇರುವ ತಲಾ ಒಬ್ಬರು ಪ್ರಾಧಿಕಾರದ ಸದಸ್ಯರಾಗಿರುತ್ತಾರೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಅಕ್ರಮ ಬೆಟ್ಟಿಂಗ್‌ ನಲ್ಲಿ ತೊಡಗಿರುವ ನೋಂದಾಯಿಸದ ಆನ್‌ ಲೈನ್‌ ವೇದಿಕೆಗಳು ಮತ್ತು ವ್ಯಕ್ತಿಗಳಿಗೆ ಚಟುವಟಿಕೆ ಸ್ಥಗಿತಗೊಳಿಸುವಂತೆ ಪ್ರಾಧಿಕಾರವು ಆದೇಶ ಹೊರಡಿಸಬೇಕು. ಈ ಅಪರಾಧವನ್ನು ಪುನರಾವರ್ತನೆ ಮಾಡಿದರೆ ರೂ.5 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಪ್ರಾಧಿಕಾರವು ನ್ಯಾಯಾಲಯದಿಂದ ವಾರಂಟ್‌ ಪಡೆದು ಶಂಕಿತ ಅಕ್ರಮ ಬೆಟ್ಟಿಂಗ್‌ ನಿರ್ವಾಹಕರ ಸ್ಥಳಗಳು, ಸರ್ವರ್‌ ಗಳು ಮತ್ತು ದಾಖಲೆಗಳ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಲೆಕ್ಕಪರಿಶೋಧನೆ ನಡೆಸಬಹುದು. ಪ್ರಾಧಿಕಾರದ ಆದೇಶಗಳ ವಿರುದ್ಧ ಶಂಕಿತ ಅಕ್ರಮ ಬೆಟ್ಟಿಂಗ್‌ ನಿರ್ವಾಹಕರು 30 ದಿನಗಳ ಒಳಗೆ ಮೇಲ್ಮನವಿಯನ್ನು ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಸಲ್ಲಿಸಬಹುದು. ರಾಜ್ಯ ಸರ್ಕಾರ ಇಂತಹ ಅಪರಾಧಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕೂಡಾ ಈ ಮಸೂದೆ ಅವಕಾಶ ನೀಡಲಿದೆ.

More articles

Latest article