ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಿ: ಸಿಎಂ ಸಿದ್ದರಾಮಯ್ಯ ಕರೆ

Most read

ಬೆಂಗಳೂರು: ಶಿಕ್ಷಣದಿಂದ ವಂಚಿತರಾಗದೆ ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಮಾಜದ ಬಂಧುಗಳಿಗೆ ಕರೆ ನೀಡಿದ್ದಾರೆ.

ಅವರು  ತಾವರೆಕೆರೆ ಬಳಿಯ ಕೆತೋಹಳ್ಳಿಯಲ್ಲಿರುವ ಬ್ರಹ್ಮಲೀನ ಜಗದ್ಗುರು ಶ್ರೀ ಬಿರೇಂದ್ರ ಕೇಶದ ತಾರಕಾನಂದಪುರಿ ಮಹಾಸ್ವಾಮಿಗಳ 19ನೇ ವರ್ಷದ ಪುಣ್ಯರಾಧನೆಯ ಸ್ಮರಣಾರ್ಥವಾಗಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಹಾಗೂ ಶಾಖಾಮಠ ಮತ್ತು ಬೆಂಗಳೂರು ಭಕ್ತರ ಭಂಡಾರದ ಕುಟೀರವನ್ನು ಲೋಕಾರ್ಪಣೆ ಮಾಡಿದ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು

ಕಾಗಿನೆಲೆ ಗುರುಪೀಠದ ಶಾಖಾಮಠದ ಭಕ್ತರ ಭಂಡಾರದ ಕುಟೀರಕ್ಕೆ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿ ಉದ್ಘಾಟನೆ ಮಾಡುತ್ತಿರುವುದು ಸಂತಸ  ತಂದಿದೆ. ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. 10 ಕೋಟಿ ರೂ.ಬೆಲೆಬಾಳುವ ಆಸ್ತಿಯನ್ನು ಒಂದು ಎಕರೆ ಜಾಗವನ್ನು ಮಹೇಶ್ ಅವರು ಕೊಟ್ಟಿದ್ದು ಶ್ಲಾಘನೀಯ ಎಂದರು.

ಮಠ ಬೆಳೆಯಬೇಕು. ಬೆಳೆಯಬೇಕಾದರೆ ಜನರಿಂದಲೇ ಬೆಳೆಯಬೇಕು. ಮಠಮಾನ್ಯಗಳು ಬೆಳೆಯಬೇಕಾದರೆ ಜನರಿಂದ ಮಾತ್ರ ಸಾಧ್ಯ. ಸರ್ಕಾರದ ಮೇಲೆ ಅವಲಂಬಿತವಾದರೆ ಬೆಳೆಯಲು ಸಾಧ್ಯವಿಲ್ಲ. 1992 ರಲ್ಲಿ ಪ್ರಾರಂಭವಾದ ಮಠವನ್ನು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 25 ಲಕ್ಷ ರೂ.ಗಳ ನೀಡಲು ಮುಂದಾದಾಗ, ಅದನ್ನು ನಿರಾಕರಿಸಲಾಯಿತು ಎಂದು ಸ್ಮರಿಸಿದರು. ಉದ್ಯಮಿ ಹರಿ ಖೋಡೆಯವರು ಮಠ ಕುರುಬರ ಮಠವಲ್ಲ, ದಲಿತರು, ಅಲ್ಪಸಂಖ್ಯಾತರು ಹಾಗೂ ಮಠವನ್ನು ಹೊಂದಿಲ್ಲದವರಿಗೆ ಸೇರಿದ ಮಠ ಎಂದು ಘೋಷಣೆ ಮಾಡಿದ್ದರು ಎಂದು ತಿಳಿಸಿದರು.

ಜನರಲ್ಲಿ ಜಾಗೃತಿ ಮೂಡಿಸಲು ಮಠದ ಅಗತ್ಯವಿದೆ:

ಜನರಲ್ಲಿ ಜಾಗೃತಿ ಮೂಡಿಸಲು ಮಠದ ಅಗತ್ಯವಿದೆ. ಶಿಕ್ಷಣ, ಆರೋಗ್ಯ, ಸಂಘಟನೆ ಸಾಧ್ಯವಾಗುತ್ತಿರಲಿಲ್ಲ. ಜಾತ್ಯಾತೀತ ಸಮಾಜ ನಿರ್ಮಾಣ ಮಾಡಬೇಕು ಎಂದು ಬಸವಾದಿ ಶರಣರು, ಕನಕದಾಸರು, ಮಹಾತ್ಮಾ ಗಾಂಧಿ,  ಅಂಬೇಡ್ಕರ್ ಹಾಗೂ ಸಂವಿಧಾನ ಹೇಳಿರುವುದು. ಸರ್ವೋದಯವಾಗಬೇಕೆಂದು ಇವರೆಲ್ಲರೂ ಕರೆ ನೀಡಿದ್ದರು. ಕುವೆಂಪು ಅವರು  ಸರ್ವರಿಗೂ ಸಮಪಾಲು, ಸಮಬಾಳು ಇರಬೇಕೆಂದು ಕರೆ ನೀಡಿದರು. ಅಂತಿಮವಾಗಿ ಸಮ ಸಮಾಜ ನಿರ್ಮಾಣವಾಗಬೇಕು ಎಂದರು. ವಿಚಾರ ಕ್ರಾಂತಿಕಾರರನ್ನು ನೆನೆದು ಸ್ಪೂರ್ತಿ ಪಡೆಯುವ ಕೆಲಸವಾಗಬೇಕು ಎಂದರು.

ಶಿಕ್ಷಣ ಪಡೆದು ಗುಲಾಮಗಿರಿಯಿಂದ ದೂರವಾಗಬೇಕು:

ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ಜಾತಿಯತೆ ವಾಸ್ತವವಾಗಿದ್ದು, ಶಿಕ್ಷಣ, ಸಂಘಟನೆ,ಹೋರಾಟಗಳನ್ನು ಶೋಷಿತ ವರ್ಗದ ಜನರು ಪಾಲಿಸಬೇಕಾದ ಅಂಶಗಳು. ಇಲ್ಲದಿದ್ದರೆ ಜಾತಿ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಶೋಷಿತ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ. ವಿದ್ಯೆಯಿಂದ ಮಾತ್ರ ಸ್ವಾಭಿಮಾನ ಬೆಳೆದು ಮನುಷ್ಯರಾಗಲು ಸಾಧ್ಯ. ಇಲ್ಲವೇ ಗುಲಾಮಗಿರಿ ನಮ್ಮಲ್ಲಿ ಮನೆಮಾಡುತ್ತದೆ. ಸಮುದಾಯವನ್ನು ಬೆಳೆಸಿ ಇತರರನ್ನು ಬೆಳೆಸಿ ಎಂದು ತಿಳಿಸಿದರು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ವ್ಯಾಪ್ತಿಯಲ್ಲಿ   80 ಎಕರೆ ಸರ್ಕಾರಿ ಜಮೀನನ್ನು ವಿವಿಧ ಸಮಾಜದ ಮಠಮಾನ್ಯಗಳಿಗೆ ಹಂಚುವ ಬಗ್ಗೆ ಸರ್ಕಾರ ಪರಿಶೀಲಿಸಿದೆ. ವಿವಿಧ ಸಮಾಜದ ಸ್ವಾಮೀಜಿಗಳು ಕೋರಿದಂತೆ ಸಮಾಜದ ಅಭಿವೃದ್ಧಿಗೆ ಅನುದಾನವನ್ನು ನೀಡಲು ಪರಿಶೀಲಿಸಲಾಗುವುದು ಎಂದರು.

ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷ  ಜಗದ್ಗುರು ನಿರಂಜನಾನಂದ ಸ್ವಾಮಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್ ಎಂ.ರೇವಣ್ಣ, ಸಚಿವರಾದ ಬೈರತಿ ಸುರೇಶ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪುರ, ಬಸವರಾಜ ಶಿವಣ್ಣ, ಹುಲಿನಾಯ್ಕರ್ , ಆರ್.ಶಂಕರ್, ಶಾಸಕರಾದ  ಮಂಜುನಾಥ್, ಶ್ರೀನಿವಾಸ್,  ಭೀಮಸೇನಾ ಚಿಮ್ಮನಕಟ್ಟಿ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

More articles

Latest article