ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗಾಗಿ 300 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, 30 ಉದ್ಯಾನಗಳ ಅಭಿವೃದ್ಧಿಗೆ ತಲಾ 1 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ ಎಂದು ಹೆಬ್ಬಾಳ ಶಾಸಕ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಶನಿವಾರ ಕ್ಷೇತ್ರದ ನಾಗರಿಕರ ಕುಂದು-ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ಬಹುತೇಕ ಬಡಾವಣೆಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ 300 ಕೋಟಿ ರೂಪಾಯಿಗಳ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿರುವ ಪ್ರಮುಖ 30 ಉದ್ಯಾನವನಗಳ ಅಭಿವೃದ್ಧಿಗೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಸರ್ಕಾರದಿಂದ ಪ್ರತಿ ಉದ್ಯಾನಕ್ಕೆ 1 ಕೋಟಿ ರೂಪಾಯಿಯಂತೆ ಒಟ್ಟು 30 ಕೋಟಿ ರೂಪಾಯಿಯನ್ನು ಮಂಜೂರು ಮಾಡಲಾಗಿದೆ. ರಸ್ತೆಗಳ ಕಾಮಗಾರಿ ವಿಳಂಬವಾಗುತ್ತಿರುವುದು ಮತ್ತು ಕಾಮಗಾರಿ ಆರಂಭವಾಗದೇ ಇರುವ ಬಗ್ಗೆ ಸಾರ್ವಜನಿಕರು ಸಚಿವರ ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮೂರು ತಿಂಗಳೊಳಗಾಗಿ ಕ್ಷೇತ್ರದ ಪ್ರತಿ ರಸ್ತೆಗೂ ಡಾಂಬರೀಕರಣ ಮಾಡಲಾಗುತ್ತದೆ. ಇದೇ ವೇಳೆ, ಪ್ರಗತಿಯಲ್ಲಿರುವ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನೂ ಪೂರ್ಣಗೊಳಿಸುವುದರ ಜೊತೆಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗೆ ಕಟ್ಟಪ್ಪಣೆ ಮಾಡಿದರು.
ರಸ್ತೆಯಲ್ಲಿ ಭೂಗತ ಚರಂಡಿ ಕಾಮಗಾರಿ ಮುಗಿದು ಮೂರ್ನಾಲ್ಕು ತಿಂಗಳು ಕಳೆದಿದ್ದರೂ ರಸ್ತೆಯನ್ನು ದುರಸ್ತಿ ಮಾಡದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬೈರತಿ ಸುರೇಶ್, ರಸ್ತೆಗಳ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಾಗರಿಕರಿಗೆ ತೊಂದರೆ ಆಗಬಾರದು ಎಂದು ತಾಕೀತು ಮಾಡಿದರು. ಸಾರ್ವಜನಿಕರು ಕೆಲವು ಕಡೆ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಬಗ್ಗೆ ನಾಗರಿಕರು ಗಮನ ಸೆಳೆದಾಗ, ಕೂಡಲೇ ಅಂತಹ ಸ್ಥಳಗಳಲ್ಲಿ ಮಾರ್ಷಲ್ ಗಳನ್ನು ನೇಮಕ ಮಾಡಿ ಕಸ ಹಾಕುವುದನ್ನು ತಡೆಯಬೇಕೆಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಡಾವಣೆಗಳ ರಸ್ತೆಗಳಲ್ಲಿ ವಾಹನ ನಿಲುಗಡೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಅಗಲ ರಸ್ತೆಗಳಲ್ಲಿ ದಿನ ಬಿಟ್ಟು ದಿನ ಇಕ್ಕೆಲಗಳಲ್ಲಿ ಪಾರ್ಕಿಂಗ್ ಗೆ ಅವಕಾಶ ನೀಡಬೇಕು. ಕಿರಿದಾದ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಬೇಕು. ಹಾಗಿದ್ದಾಗ್ಯೂ, ವಾಹನಗಳನ್ನು ಪಾರ್ಕಿಂಗ್ ಮಾಡಿದರೆ ದಂಡ ವಿಧಿಸಬೇಕೆಂದು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದರು.
ಇ-ಖಾತಾ ಮಾಡಿಕೊಡಲು ಕಂದಾಯ ಇಲಾಖೆಯ ಕೆಲವು ಸಿಬ್ಬಂದಿ ಲಂಚ ಪಡೆಯುತ್ತಿರುವ ಬಗ್ಗೆ ಮಾಹಿತಿ. ಅಂತಹವರ ವಿರುದ್ಧ ದೂರು ಪಡೆದು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಸಚಿವ ಬೈರತಿ ಸುರೇಶ್ ಎಚ್ಚರಿಕೆ ನೀಡಿದರು. ಕ್ಷೇತ್ರದ ಅರ್ಹ ನಾಗರಿಕರಿಗೆ ತಮ್ಮ ಆಸ್ತಿಗಳಿಗೆ ಇ-ಖಾತಾ ನೀಡುವುದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 22 ರಂದು ಎಚ್ಎಂಟಿ ಮೈದಾನದಲ್ಲಿ ಬೃಹತ್ ಇ-ಖಾತಾ ಮೇಳವನ್ನು ಆಯೋಜಿಸಲಾಗುತ್ತಿದ್ದು, 20 ಸಾವಿರಕ್ಕೂ ಅಧಿಕ ಸಾರ್ವಜನಿಕರಿಗೆ ಇ-ಖಾತೆಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.